2 ದಶಕಗಳ ಬಳಿಕ ವಿದ್ಯುತ್ ತಂತಿ ಕಳ್ಳನ ಬಂಧನ

| Published : Jun 25 2024, 12:39 AM IST

ಸಾರಾಂಶ

ಕೆಇಬಿ ವಿದ್ಯುತ್ ಕಂಬದಲ್ಲಿದ್ದ ₹45 ಸಾವಿರ ಮೌಲ್ಯದ 60 ಕೆಜಿ ಅಲ್ಯುಮಿನಿಯಮ ವೈಯರ್ ಕಳವು ಮಾಡಿದ್ದ ಆರೋಪಿಯನ್ನು ಬರೋಬ್ಬರಿ 2 ದಶಕಗಳ ನಂತರ ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ.

- ಶಿಕಾರಿಪುರದ ಆರೋಪಿ ಚಿಕ್ಕಮಗಳೂರು ಜಿಲ್ಲೆ ಎಸ್.ಕೊಪ್ಪಲಲ್ಲಿ ಪೊಲೀಸರಿಗೆ ಸೆರೆಕನ್ನಡಪ್ರಭ ವಾರ್ತೆ, ದಾವಣಗೆರೆ

ಕೆಇಬಿ ವಿದ್ಯುತ್ ಕಂಬದಲ್ಲಿದ್ದ ₹45 ಸಾವಿರ ಮೌಲ್ಯದ 60 ಕೆಜಿ ಅಲ್ಯುಮಿನಿಯಮ ವೈಯರ್ ಕಳವು ಮಾಡಿದ್ದ ಆರೋಪಿಯನ್ನು ಬರೋಬ್ಬರಿ 2 ದಶಕಗಳ ನಂತರ ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ.ಶಿವಮೊಗ್ಗ ಜಿಲ್ಲೆ ಶಿಕಾರಿಪುರ ವಾಸಿ, ಕೂಲಿ ಕೆಲಸಗಾರ ಎಸ್‌.ಬಿ. ಪ್ರದೀಪ (40) ಬಂಧಿತ ಆರೋಪಿ. 2001ರ ಆಗಸ್ಟ್‌ 14ರಂದು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಕೆಇಬಿ ಶಾಖಾಧಿಕಾರಿ ತಾಲೂಕಿನ ಮಾಜೇನಹಳ್ಳಿ ಬಳಿ ಜಮೀನಿನಲ್ಲಿ ಹಾದು ಹೋಗಿರುವ ಕೆಇಬಿ ವಿದ್ಯುತ್‌ ಮಾರ್ಗದ ಕಂಬದಲ್ಲಿದ್ದ ₹45 ಸಾವಿರ ಮೌಲ್ಯದ 60 ಕೆಜಿ ಅಲ್ಯುಮಿನಿಯಂ ವೈಯರ್‌ ಕಳವಾಗಿದೆ. ಆರೋಪಿಗಳನ್ನು ಪತ್ತೆ ಮಾಡಿ, ಸ್ವತ್ತನ್ನು ಪತ್ತೆ ಮಾಡುವಂತೆ ಕೋರಿ ಹರಿಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಶಿಕಾರಿಪುರದ ಶಾಂತಿ ನಗರದ ಜಯಲಕ್ಷ್ಮೀ ಕಾಂಪೌಂಡ್ ವಾಸಿ ಎಸ್.ಬಿ.ಪ್ರದೀಪ ಎಂಬಾತನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅನಂತರ ಜಮೀನಿನ ಮೇಲೆ ಹೊರಬಂದ ಆರೋಪಿ ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.2004ರ ಸೆಪ್ಟೆಂಬರ್‌ 27ರಂದು ನ್ಯಾಯಾಲಯ ಪ್ರಕರಣವನ್ನು ಎಲ್‌ಪಿಆರ್‌ ನಂ.60/2004ನೇ ಪ್ರಕರಣ ಎಂದು ಮಾನ್ಯ ಮಾಡಿತ್ತು.ಆರೋಪಿ ಪ್ರದೀಪ್‌ ಪತ್ತೆಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಮುಂದಾಗಿತ್ತು. ಪ್ರಕರಣದ 23 ವರ್ಷಗಳ ನಂತರ ಜೂ.20 ರಂದು ಶಿಕಾರಿಪುರದ ಶಾಂತಿ ನಗರಕ್ಕೆ ಪೊಲೀಸರು ಹೋಗಿ ವಿಚಾರಿಸಿದ್ದಾರೆ. ಆಗ ಆತ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಕೊಪ್ಪಲು ಗ್ರಾಮದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದಾರೆ. ಅದರಂತೆ ಆರೋಪಿ ಎಸ್.ಬಿ.ಪ್ರದೀಪನನ್ನು ಪತ್ತೆ ಮಾಡಿ, ಕರೆ ತಂದರು.

ಆರೋಪಿಯನ್ನು ಜೂ.21ರಂದು ಠಾಣೆಗೆ ಕರೆ ತಂದು, 23 ವರ್ಷಗಳ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಸ್ಪಿ ಉಮಾ ಪ್ರಶಾಂತ ಸೂಚನೆಯಂತೆ ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಎಸ್.ಬಸವರಾಜ, ಹರಿಹರ ಸಿಪಿಐ ಸುರೇಶ ಸಗರಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪಿಎಸ್‌ಐ ಮಂಜುನಾಥ ಕುಪ್ಪೇಲೂರು, ಸಿಬ್ಬಂದಿ ತಂಡ ಆರೋಪಿ ಪ್ರದೀಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.- - -(-ಪೋಟೋ: ಸಾಂದರ್ಭಿಕ ಚಿತ್ರ)