ಸಾರಾಂಶ
ಕನಕಗಿರಿ: ಬಾಲಕನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಅಸು ನೀಗಿದ ಘಟನೆ ಪಟ್ಟಣದ ರಾಧಿಕಾ ಚಿತ್ರಮಂದಿರ ಬಳಿ ಇರುವ ಹಳ್ಳದಲ್ಲಿ ಶುಕ್ರವಾರ ನಡೆದಿದೆ.
ವಿನಯ ಶ್ರೀಶೈಲ (೧೩) ಮೃತ ಬಾಲಕ. ಪಟ್ಟಣದ ೧೭ನೇ ವಾರ್ಡಿನ ಗೋಲಗೆರಪ್ಪ ಕಾಲನಿ ನಿವಾಸಿಯಾಗಿದ್ದ ಈ ಬಾಲಕ ಹಳ್ಳದಿಂದ ಮನೆಗೆ ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ. ಇದರಿಂದ ಬಾಲಕ ಒದ್ದಾಡಿ ಹಳ್ಳದ ನೀರಿಗೆ ಬಿದ್ದಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಇದನ್ನು ನೋಡಿದ ಕಾಲನಿ ನಿವಾಸಿಗಳು ಓಡಿ ಬಂದು ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಜೆಸ್ಕಾಂ ಅಧಿಕಾರಿಗಳು ಕಾಲನಿಯ ಲೈನ್ ತೆಗೆಯಿಸಿದ್ದಾರೆ. ಬಳಿಕ ಎಇಇ ವೀರೇಶ, ಸ್ಥಳೀಯ ಶಾಖಾಧಿಕಾರಿ ಆನಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು.ವಿದ್ಯುತ್ ಕಂಬ ಹಾಗೂ ತಂತಿ ತೆರವಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಅನೇಕ ವರ್ಷಗಳಿಂದ ಅಳವಡಿಸಿರುವ ವಿದ್ಯುತ್ ಕಂಬ, ತಂತಿಯನ್ನು ಬದಲಿಸಿಲ್ಲ. ಇದರಿಂದ ಇಲ್ಲಿಯ ಜನ ವಿದ್ಯುತ್ ಅಪಾಯಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಪಪಂ ಸದಸ್ಯ ಹನುಮಂತ ಬಸರಿಗಿಡ ಎಚ್ಚರಿಸಿದರು.
ಕಾಲನಿಯ ವಿದ್ಯುತ್ ಅವ್ಯವಸ್ಥೆಯ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ ಬೇಸರ ವ್ಯಕ್ತಪಡಿಸಿದರು.ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಶ್ರೀಶೈಲ, ಪಾರ್ವತಮ್ಮನ ಒಬ್ಬನೇ ಮಗನಾಗಿದ್ದ ವಿನಯಕುಮಾರ ಹಲವು ವರ್ಷಗಳ ಆನಂತರ ಜನಿಸಿದ್ದ. ವಿದ್ಯುತ್ ಅವಘಡದಲ್ಲಿ ಬಾಲಕ ಮೃತಪಟ್ಟಿರುವ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೆರದಿದ್ದ ಜನ ದುಃಖತಪ್ತರಾಗಿ ಕುಟುಂಬಸ್ಥರೊಂದಿಗೆ ಕಣ್ಣೀರು ಹಾಕಿದರು. ಪಟ್ಟಣದ ಶಿವಯೋಗಿ ಚನ್ನಮಲ್ಲ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಯಾಗಿದ್ದ ವಿನಯ ಸಾವಿಗೆ ಕಾಲನಿಯ ಜನರು ಕಂಬನಿ ಮಿಡಿದರು.