ಸಾರಾಂಶ
ಕಿಕ್ಕೇರಿ: ಚಿಲ್ಲರೆ ಅಂಗಡಿ ಮಳಿಗೆಗೆ ಬೆಂಕಿ ತಗುಲಿ ಭಾರೀ ಪ್ರಮಾಣದಲ್ಲಿ ವಸ್ತುಗಳು ಹಾನಿಯಾಗಿರುವ ಘಟನೆ ಪಟ್ಟಣದ ಹಾಲಿನ ಡೇರಿ ರಸ್ತೆಯಲ್ಲಿ ನಡೆದಿದೆ. ಬೆಂಕಿ ನಂದಿಸಲು ಹೋದ ಅಂಗಡಿ ಮಾಲೀಕ ಪ್ರಸನ್ನ ಅವರಿಗೆ ತೀವ್ರ ಬೆಂಕಿಯಿಂದ ಸುಟ್ಟು ಗಂಭೀರ ಗಾಯಗಳಾಗಿವೆ. ಅಂಗಡಿಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಪ್ರಸನ್ನ ಅವರ ಅಂಗಡಿ ಹಾಗೂ ಮನೆ ಒಟ್ಟಿಗೆ ಇದ್ದು ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅಂಗಡಿಯೊಳಗೆ ದಟ್ಟ ಹೊಗೆ ಕಾಣಿಸಿಕೊಂಡು ನಂತರ ಬೆಂಕಿ ತೀವ್ರತೆ ಹೆಚ್ಚಾಗಿ ಅಂಗಡಿ ಹಾಗೂ ಮೇಲ್ಛಾವಣೆ ಸುತ್ತ ಹರಡಿದೆ. ಬೆಂಕಿ ನಂದಿಸಲು ಪ್ರಯತ್ನ ಮಾಡಿ ಮಾಲೀಕರಿಗೆ ಮುಖ ಹಾಗೂ ಅಂಗಾಂಗಗಳು ಸುಟ್ಟುಹೋಗಿವೆ. ವಿಷಯ ತಿಳಿದು ಕೆ.ಆರ್.ಪೇಟೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ಮನೆ, ಅಂಗಡಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ಗಾಯಾಳು ಪ್ರಸನ್ನ ಅವರನ್ನು ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಎನ್.ಆರ್.ಚಂದ್ರಶೇಖರ್, ಸಿಬ್ಬಂದಿ ಸೋಮಶೇಖರಗೌಡ, ಶ್ರೀಕಾಂತ್ ಅವಪ್ಪರಾಯಣ್ಣನವರ್, ಪ್ರಮೋದ್, ಮೌನೇಶ್ ಕಟ್ಟಿಮನೆ ಇದ್ದರು.