ಕೃಷಿಗೆ 7 ಗಂಟೆಗಿಂತ ಹೆಚ್ಚು ಕಾಲ ವಿದ್ಯುತ್: ಜಾರ್ಜ್‌

| Published : Feb 19 2025, 12:51 AM IST

ಸಾರಾಂಶ

ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರಿಗೆ ಈಗಿರುವ 7 ಗಂಟೆಗಿಂತ ಹೆಚ್ಚು ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕುಸುಮ್ ''''''''ಸಿ'''''''' ಯೋಜನೆಯಡಿ ಹೆಚ್ಚು ವಿದ್ಯುತ್ ಉತ್ಪಾದನೆ: ಇಂಧನ ಸಚಿವ ಹೇಳಿಕೆ । ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರಿಗೆ ಈಗಿರುವ 7 ಗಂಟೆಗಿಂತ ಹೆಚ್ಚು ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಮಂಗಳವಾರ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕುಸುಮ್ ಸಿ ಯೋಜನೆ ಮೂಲಕ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ 7 ಗಂಟೆಗಿಂತ ಹೆಚ್ಚು ಕಾಲ ವಿದ್ಯುತ್ ಪೂರೈಕೆ ಕಲ್ಪಿಸಲಾಗುವುದು ಎಂದರು.

ಅದೇ ರೀತಿ ರೈತರು ಹೊಲಗಳಲ್ಲಿ ನಿರ್ಮಿಸಿರುವ ಮನೆಗಳಿಗೂ ನಿರಂತರ ಜ್ಯೋತಿ ಮೂಲಕ ಸಿಂಗಲ್ ಫೇಸ್ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೋಟಾರ್‌ಗೆ ವಿದ್ಯುತ್‌ ಬಳಸಬಾರದು. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ 4 ಲಕ್ಷಕ್ಕೂ ಅಧಿಕ ಸಂಪರ್ಕಗಳನ್ನು ಶೀಘ್ರದಲ್ಲೇ ಸಕ್ರಮಗೊಳಿಸಲಾಗುವುದು ಎಂದರು.

ಪಾವಗಡ ಬಳಿ ಈಗಾಗಲೇ 10 ಸಾವಿರ ಎಕರೆಯಲ್ಲಿ ಸೋಲಾರ್ ಸಿಸ್ಟಮ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇನ್ನು 10 ಸಾವಿರ ಎಕರೆಯಲ್ಲಿ ವಿದ್ಯುತ್‌ ಉತ್ಪಾದನೆಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ರೈತರು ಸಹ ಮುಂದೆ ಬಂದಿದ್ದಾರೆ. ಅವರು ರೈತರಾಗಲೀ, ಸಾರ್ವಜನಿಕರಾಗಲೀ ಅಕ್ರಮ ವಿದ್ಯುತ್ ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

ನಾನು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ, ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವನಾಗಿ ಅನೇಕ ಖಾತೆಗಳ ಜವಾಬ್ದಾರಿ ಹೊತ್ತಿದ್ದೇನೆ. ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸವಾಗಿದೆ. ಪಕ್ಷನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಸದಸ್ಯ ಮುದೇಗೌಡರ ಗಿರೀಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕೊಡಪಾನ ದಾದಾಪೀರ್ ಮಾತನಾಡಿದರು.

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಹರಿಹರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ್, ಸಾಗರ್ ಎಲ್.ಎಚ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮೇಯರ್‌ ಕೆ.ಚಮನ್ ಸಾಬ್, ಸದಸ್ಯ ಎ.ನಾಗರಾಜ, ಸುಭಾನ್ ಸಾಬ್ ಹಾಗೂ ಕಾಂಗ್ರೆಸ್ ವಿವಿಧ ಘಟಕಗಳ, ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

- - - -18ಕೆಡಿವಿಜಿ36.ಜೆಪಿಜಿ:

ದಾವಣಗೆರೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.