ಸಾರಾಂಶ
ಶಿರಸಿ: ತಾಲೂಕಿನ ಹುಲೇಕಲ್ ಉಪ ತಹಸೀಲ್ದಾರ್ ಕಚೇರಿಗೆ(ನಾಡ ಕಚೇರಿ) ಸಮರ್ಪಕ ವಿದ್ಯುತ್ ಪೂರೈಕೆಯಾಗದಿರುವ ಕಾರಣ ವಿವಿಧ ಪ್ರಮಾಣಪತ್ರ ಪಡೆಯಲು ಕಚೇರಿಗೆ ಆಗಮಿಸಲು ಸಾರ್ವಜನಿಕರು ದಿನಗಟ್ಟಲೆ ಕಾದು ಸುಸ್ತಾಗಿ, ತೊಂದರೆ ಅನುಭವಿಸುವಂತಾಗಿದೆ.ಹುಲೇಕಲ್, ಸೋಂದಾ, ವಾನಳ್ಳಿ, ಕೋಡ್ನಗದ್ದೆ, ಮೇಲಿನ ಓಣಿಕೇರಿ, ಸಾಲ್ಕಣಿ ಸೇರಿದಂತೆ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಈ ನಾಡಕಚೇರಿ ವ್ಯಾಪ್ತಿಯಲ್ಲಿದ್ದಾರೆ. ಹೋಬಳಿ ಕೇಂದ್ರದಲ್ಲಿ ದೊರೆಯುವ ಸೇವೆಗಳಾದ ಇ- ನಕ್ಷೆ, ಇ- ಸ್ವತ್ತು, ಪೋಡಿ, ಹದ್ದುಬಸ್ತು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಚಿಕ್ಕ ಹಿಡುವಳಿದಾರ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ, ಮೈತ್ರಿ, ಮನಸ್ವಿನಿ, ಅನುಕಂಪದ ಆಧಾರದ ಮೇಲೆ ನೌಕರಿಗೆ ಸಂಬಂಧಿಸಿದ ಪ್ರಮಾಣಪತ್ರ, ವಾರಸಾ, ವಾಸ್ತವ್ಯ, ಭೂ ಹಿಡುವಳಿದಾರ, ಬೋನೋಫೈಡ್ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ನಿತ್ಯ ನಾಡಕಚೇರಿಗೆ ಬರುತ್ತಾರೆ. ಆದರೆ ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರು ದಿನಕಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಅನುಕೂಲವಾಗಲೆಂದು ೬ ಬ್ಯಾಟರಿಯ ಯುಪಿಎಸ್ ಅಳವಡಿಸಲಾಗಿದೆ. ಕಳೆದ ಹಲವಾರು ದಿನಗಳ ಹಿಂದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೆಟ್ಟು ಹೋಗಿದೆ. ಇದರಿಂದ ಪ್ರತಿಯೊಂದು ಕಾರ್ಯಗಳಿಗೂ ವಿದ್ಯುತ್ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಜನರಿಗೆ ನಾಳೆ ಬನ್ನಿ ಅಥವಾ ಕರೆಂಟ್ ಬರುವ ತನಕ ಕಾಯಿರಿ, ನಿಮ್ಮ ಕೆಲಸ ಮಾಡಿ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿದೆ. ಇದರಿಂದ ಸಣ್ಣಪುಟ್ಟ ಕಾರ್ಯಗಳಿಗೂ ಜನಸಾಮಾನ್ಯರು ೨- ೩ ದಿನ ಅಲೆದಾಡುವ ಸ್ಥಿತಿ ಬಂದೊದಗಿದೆ.
ಮಳೆಗಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಗಾಳಿಗೆ ವಿದ್ಯುತ್ ಕಂಬದ ಮೇಲೆ ಮರಗಳು ಬಿದ್ದು ಲೈನ್ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಈ ಕಾರಣದಿಂದ ಬದಲಿ ವ್ಯವಸ್ಥೆಯಾದ ಯುಪಿಎಸ್‌ನ್ನು ದುರಸ್ತಿ ಮಾಡಿಸಬೇಕು ಅಥವಾ ಹೊಸ ಯುಪಿಎಸ್ ಅಳವಡಿಸಲು ಕಂದಾಯ ಇಲಾಖೆ ಮುಂದಾಗಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.ಶೀಘ್ರ ಕ್ರಮ: ಹುಲೇಕಲ್ ನಾಡಕಚೇರಿಯ ಯುಪಿಎಸ್ ಸುಟ್ಟು ಹಾಳಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಯುಪಿಎಸ್ ಮಂಜೂರಿ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದರು.