ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಸುಬ್ರಹ್ಮಣ್ಯದಿಂದ ಪುತ್ತೂರು ವರೆಗಿನ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಗಿಯುತ್ತಾ ಬಂದಿದೆ. ಪ್ರಸಕ್ತ ವಯರಿಂಗ್ ಕೆಲಸ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.ಸಿರಿಬಾಗಿಲು-ಸುಬ್ರಹ್ಮಣ್ಯ, ಸಕಲೇಶಪುರ-ವಡಗರಹಳ್ಳಿ ವರೆಗಿನ ವಿದ್ಯುದೀಕರಣ ಕಾಮಗಾರಿ ಬಾಕಿ ಇದೆ. ಘಾಟ್ ಪ್ರದೇಶದ ಸುರಂಗ ಮಾರ್ಗದಲ್ಲೂ ಕಾಮಗಾರಿ ನಡೆಯಬೇಕಾಗಿದೆ ಎಂದರು.
ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಬಳಿಯ ರೈಲ್ವೆ ಸೇತುವೆಯ ಅಗಲೀಕರಣದ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದೆ. ಬಂಟ್ವಾಳದ ಫ್ಲ್ಯಾಟ್‌ಫಾರಂ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.ಉಳ್ಳಾಲ ಹಾಗೂ ತೊಕ್ಕೊಟ್ಟು ರೈಲ್ವೆ ಹಳಿ ದಾಟುವ ಪ್ರದೇಶಗಳಲ್ಲಿ ಸಾಕಷ್ಟು ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಕ್ಕಾಡ್‌ನ ಡಿಆರ್‌ಎಂ ಅವರು ಈ ಜಾಗವನ್ನು ಬಂದ್ ಮಾಡುವಂತೆ ತಿಳಿಸಿರುವಂತೆ ಕ್ರಮ ವಹಿಸಲಾಗಿದೆ ಎಂದು ಪಾಲಕ್ಕಾಡ್ ವಿಭಾಗದ ರೈಲ್ವೆ ಅಧಿಕಾರಿ ಮಾಹಿತಿ ನೀಡಿದರು.
ಸೂಕ್ತ ವ್ಯವಸ್ಥೆ ಆಗುವವರೆಗೆ ಜನರು ವಿರೋಧ ವ್ಯಕ್ತಪಡಿಸಿರುವ ಜಾಗದಲ್ಲಿ ಬಂದ್ ತೆರವುಗೊಳಿಸುವಂತೆ ಸಂಸದ ನಳಿನ್ ಹೇಳಿದರಲ್ಲದೆ, ಈ ಬಗ್ಗೆ ಡಿಆರ್‌ಎಂ ಜತೆ ಮಾತನಾಡುವುದಾಗಿ ತಿಳಿಸಿದರು.ಬಿಎಸ್ಸೆನ್ನೆಲ್‌ಗೆ ಸೂಚನೆ:
ಕುಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗುವ ಸಂದರ್ಭ ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಕೊಲ್ಲಮೊಗರು ಗ್ರಾಮದಲ್ಲಿಯೂ ಈ ಸಮಸ್ಯೆ ಇದೆ. ಸೂಕ್ತ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.ದ.ಕ. ಟೆಲಿಕಾಂ ಜಿಲ್ಲೆಗೆ 196 ಹೊಸ ಬ್ಯಾಟರಿಗಳು ಬಂದಿದ್ದು, ಈಗಾಗಲೇ ಕುಗ್ರಾಮಗಳ ಟವರ್‌ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೊಲ್ಲಮೊಗ್ರು ಟವರ್‌ನ ಬ್ಯಾಟರಿಯನ್ನು ಬದಲಾಯಿಸುವಂತೆ ಸಂಸದರು ಈ ಸಂದರ್ಭ ಸೂಚನೆ ನೀಡಿದರು.
6 ತಿಂಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಪೂರ್ಣ:ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಸ್ಟಿಕ್ ಪಾರ್ಕ್ ಕಟ್ಟಡ ಕಾಮಗಾರಿ ಆರು ತಿಂಗಳಲ್ಲಿ ಮುಕ್ತಾಯವಾಗಲಿದೆ. ಈಗಾಗಲೇ ಸುಮಾರು 40 ಸಂಸ್ಥೆಗಳಿಂದ ಇಲ್ಲಿ ಬೇಡಿಕೆ ಬಂದಿದೆ. ಆದರೆ ಪಾರ್ಕ್ ರಸ್ತೆ ಜಾಗದಲ್ಲಿ ಗಣಿ ಇಲಾಖೆಯ ಮರಳು ಶೇಖರಿಸಲಾಗಿರುವುದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಧಿಕಾರಿ ಸಂಸದರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸಚಿವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಗಣಿ ಇಲಾಖೆ 15 ದಿನಗಳಲ್ಲಿ ತೆರವುಗೊಳಿಸುವುದಾಗಿ ತಿಳಿಸಿತ್ತು. ಈಗ ಮತ್ತೆ 15 ದಿನ ಎನ್ನಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶಿಸಿ, ಮುಂದಿನ ಮೂರು ದಿನಗಳಲ್ಲಿ ತೆರವುಮಾಡಿ ಕೊಡುವಂತೆ ಗಣಿ ಅಧಿಕಾರಿಗೆ ನಿರ್ದೇಶಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಅಧಿಕಾರಿ ಆ್ಯಂಟನಿ ಎಸ್. ಮರಿಯಪ್ಪ, ಪಾಲಿಕೆ ಆಯುಕ್ತ ಆನಂದ್ ಇದ್ದರು.ದಿಶಾ ಸಭೆಯನ್ನೂ ಕಾಡಿದ ಮಂಗಳೂರಿನ ನೀರಿನ ಸಮಸ್ಯೆ!ಜಲಜೀವನ್ ಮಿಷನ್ ಕಾಮಗಾರಿಯ ವಿಳಂಬ, ಅಪೂರ್ಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಚರ್ಚೆಯ ನಡುವೆ ಮಂಗಳೂರು ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆಯೂ ದಿಶಾ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರಸ್ತಾಪಿಸಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಡ್ಯಾರ್‌ನಲ್ಲಿ ಡ್ಯಾಮ್ ಕಟ್ಟಲಾಗಿದೆ. ಪೈಪ್‌ಲೈನ್ ಹಾಕಲಾಗಿದೆ. ಆದರೆ ನೀರಿನ ಮೂಲ ಯಾವುದು ಎಂದು ಪ್ರಶ್ನಿಸಿದರು.ಸರಿಯಾದ ಯೋಜನೆಯೇ ಇಲ್ಲದೆ ಪಾಲಿಕೆಯ ಅನುಮತಿಯನ್ನೂ ಪಡೆಯದೆ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ಜನರೇ ಈಗಾಗಲೇ ನೀರಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮಾಂತರ ಭಾಗಗಳಿಗೆ ಮಂಗಳೂರಿಗೆ ಪೂರೈಕೆಯಾಗುವ ಜಲಮೂಲದಿಂದ ನೀರು ಪೂರೈಕೆಯಾಗುತ್ತಿದೆ. ಪಾಲಿಕೆಗೆ ಒಂದು ರುಪಾಯಿ ಕೂಡಾ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ನೀರಿನ ಸಮಸ್ಯೆ ನಗರದಲ್ಲಿ ಕಾಣಿಸಿಕೊಂಡಿರುವುದರಿಂದ ಇದು ಇನ್ನಷ್ಟು ಕಾಡುವ ಸಾಧ್ಯತೆ ಇದೆ. ಹಾಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಲಜೀವನ್ ಮಿಶನ್‌ನಡಿ ನೀರು ಪೂರೈಕೆಯನ್ನು ತುರ್ತುಗೊಳಿಸಬೇಕು. ಮಳವೂರು ಡ್ಯಾಂನಿಂದ ಮಂಗಳೂರಿಗೆ ನೀರು ಪೂರೈಕೆ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.ಜಲಜೀವನ್ ಮಿಶನ್ ಯೋಜನೆಯಡಿ 90,000 ಮನೆಗಳಿಗೆ ಪೈಪ್‌ಲೈನ್ ಸಂಪರ್ಕ ಒದಗಿಸಬೇಕಾಗಿದೆ. ಈಗಾಗಲೇ ಸುಮಾರು 50,000 ಮನೆಗಳ ಸಂಪರ್ಕ ಪೂರ್ಣಗೊಂಡಿದೆ. ಇನ್ನೂ ಸುಮಾರು 40 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಂದರು ಭೂಮಿ ಬಾಡಿಗೆ ವಿಚಾರಣೆಗೆ ಆದೇಶ
ಬಂದರು ಇಲಾಖೆಗೆ ಸೇರಿದ ನೇತ್ರಾವತಿ ನದಿ ಬದಿಯ ಜಾಗವನ್ನು ಲೀಸ್ ಮುಗಿದರೂ ಸಂಬಂಧಪಟ್ಟವರಿಂದ ಹಿಂದಕ್ಕೆ ಪಡೆಯದೆ ಬಾಡಿಗೆಗೆ ನೀಡಿರುವುದಕ್ಕೆ ಕಟು ಆಕ್ಷೇಪ ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್, ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ, ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.ಸ್ಮಾರ್ಟ್‌ಸಿಟಿಯ ವಾಟರ್‌ಫ್ರಂಟ್ ಕಾಮಗಾರಿಗಳನ್ನು ನಿರ್ವಹಿಸುವುದಕ್ಕೆ ಕೆಲವು ಖಾಸಗಿಯವರು ನ್ಯಾಯಾಲಯಕ್ಕೆ ತೆರಳಿ ಅಡ್ಡಿಪಡಿಸುತ್ತಿದ್ದಾರೆ. ವಾಸ್ತವವಾಗಿ ಲೀಸ್ ಮುಗಿದಿದ್ದರೂ ಕೆಲವು ಅಧಿಕಾರಿಗಳು ಬಾಡಿಗೆಗೆ ಜಾಗ ನೀಡಿರುವುದು ಕಂಡುಬಂದಿದೆ, ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಅವರು ತಿಳಿಸಿದರು.