ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ: ಹಾಸ್ಟೆಲ್ ವಿದ್ಯಾರ್ಥಿ ಸಾವು

| Published : Jun 10 2024, 12:30 AM IST / Updated: Jun 10 2024, 05:53 AM IST

death of newborn baby
ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ: ಹಾಸ್ಟೆಲ್ ವಿದ್ಯಾರ್ಥಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿರುವ ಡಾ.ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

 ಹೊಸಕೋಟೆ :  ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿರುವ ಡಾ.ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದ ನಿವಾಸಿ ಸಾಯಿಭವನ್ (13) ಮೃತ ದುರ್ದೈವಿ. ಮೃತ ಸಾಯಿಭವನ್ ನಗರದ ಬಾಲಕರ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಿಕೊಂಡು ವಸತಿ ನಿಲಯದಲ್ಲಿ ವಾಸವಾಗಿದ್ದ. ಶನಿವಾರ ಸಂಜೆ ಬಟ್ಟೆ ಒಗೆದು ಮಹಡಿಯ ಮೇಲೆ ಒಣಗಿ ಹಾಕಿದ್ದ. ಭಾನುವಾರ ಬೆಳಗಿನ ಜಾವ 6 ಗಂಟೆಯಲ್ಲೇ ತನ್ನ ತಮ್ಮನಾದ ಸಾಯಿಕುಶಾಲ್‌ನನ್ನು ಕರೆದುಕೊಂಡು ಮಹಡಿಯ ಮೇಲೆ ಹೋಗಿ ಒಣಗಲು ಹಾಕಿದ್ದ ಬಟ್ಟೆಯನ್ನು ತೆಗೆದುಕೊಂಡು ನಂತರ ಪಕ್ಕದಲ್ಲೇ ಇದ್ದ ಮಾವಿನ ಮರದಲ್ಲಿ ಮಾವಿನ ಕಾಯಿ ಕೀಳಲು ಮಹಡಿಯ ಮೇಲೆ ಇದ್ದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಹೋದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ.

ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿ ಸಾಯಿಭವನ್ ಇದೇ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಪೋಷಕರು ಆಗಮಿಸಿ ವಸತಿ ನಿಲಯಕ್ಕೆ ಬಿಟ್ಟು ಹೋಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಅನುರಾಧ, ಜಂಟಿ ನಿರ್ದೇಶಕ ದೇವರಾಜು, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೆಶಕ ಟಿಎಲ್‌ಎಸ್ ಪ್ರೇಮ. ಕಾರ್ಯನಿರ್ವಹಣಾದಿಕಾರಿ ಮಂಜುನಾಥ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ಭೇಟಿ ನೀಡಿ ಪರಿಶೀಲಿಸಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

5 ಲಕ್ಷ ಪರಿಹಾರ ಭರವಸೆ: ಸ್ಥಳಕ್ಕಾಗಮಿಸಿದ ಆಯುಕ್ತ ರಾಕೇಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಯ ಸಾವು ಸಾಕಷ್ಟು ನೋವುಂಟು ಮಾಡಿದ್ದು, ಕಟ್ಟಡದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಬದಲಾವಣೆಗೆ ಬೆಸ್ಕಾಂಗೆ ಮೂರು ಬಾರಿ ನಮ್ಮ ಇಲಾಖೆ ಸಿಬ್ಬಂದಿ ಪತ್ರ ಸಲ್ಲಿಸಿದ್ದರೂ ಬೆಸ್ಕಾಂ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಆದ್ದರಿಂದ ಮೃತರ ಕುಟುಂಬಕ್ಕೆ ನಮ್ಮ ಇಲಾಖೆ ವತಿಯಿಂದ 5 ಲಕ್ಷ ರು. ಪರಿಹಾರ ಕೊಡಿಸುವ ಭರವಸೆ ನೀಡಿದರು.

25 ಲಕ್ಷ ರು. ಪರಿಹಾರ ಹಾಗೂ ಬೆಸ್ಕಾಂ ವಿರುದ್ಧ ಕ್ರಮಕ್ಕೆ ಆಗ್ರಹ:

ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತಪಡಲು ಬೆಸ್ಕಾಂ ಇಲಾಖೆ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೇ ಮೃತರ ಕುಟುಂಬಕ್ಕೆ ಕೇವಲ 5 ಲಕ್ಷ ಪರಿಹಾರ ಕೊಟ್ಟರೆ ಸಾಲದು. ಬದಲಾಗಿ 25ಲಕ್ಷ ರು. ಪರಿಹಾರ ಹಾಗೂ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಕೆಲಸ ಕೊಡಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಆಗ್ರಹಿಸಿದರು.