ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇವಿಎಂಗಳಲ್ಲಿ ಅಳವಡಿಸಿರುವ ಸಾಫ್ಟ್‌ವೇರ್ ಪರಿಶೀಲನೆಗೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಗೆ ಅವಕಾಶವಿಲ್ಲದೇ ಇರುವುದು ಅಪಾರದರ್ಶಕತೆಗೆ ಕಾರಣವಾಗಿದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ ತಿಪ್ಪೇ ಸ್ವಾಮಿ ಹೇಳಿದರು.ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಇವಿಎಂ ಮತಯಂತ್ರ ಬಳಕೆ ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಅಪಾರದರ್ಶಕತೆ ಚುನಾವಣಾ ಫಲಿತಾಂಶಗಳ ನ್ಯಾಯ ಸಮ್ಮತತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದರು.
ಇವಿಎಂಗಳ ಡಿಜಿಟಲ್ ಸ್ವರೂಪವು ಅವುಗಳನ್ನು ಹ್ಯಾಕಿಂಗ್ ಮತ್ತು ಟ್ಯಾಪಿಂಗ್‌ಗೆ ಗುರಿಯಾಗುವಂತೆ ಮಾಡುತ್ತದೆ. ಇದು ಚುನಾವಣಾ ಪ್ರಕ್ರಿಯೆ ಪಾವಿತ್ರತೆಗೆ ಧಕ್ಕೆ ತರುತ್ತದೆ. ಇವಿಎಂ ಮತಯಂತ್ರ, ಮತಗಳ ಪ್ರಗತಿ ಪರಿಶೀಲಿಸಲು ಅಸಮರ್ಥತೆ ಹೊಂದಿದೆ. ಇವಿಎಂಗಳು ಮತದ ಭೌತಿಕ ಪ್ರತಿ ಉತ್ಪಾದಿಸುವುದಿಲ್ಲ. ಇದರಿಂದಾಗಿ ಮತದಾನವಾದ ಮತಗಳ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ನಡೆಸುವುದು ಸವಾಲಾಗಿದೆ. ಇದು ನಾಗರಿಕರಿಗೆ ತನ್ನ ಮತದಾನ ಖಚಿತಪಡಿಸುವ ಹಕ್ಕನ್ನು ನಿರಾಕರಿಸುತ್ತದೆ. ಅವರ ಮತಗಳನ್ನು ನಿಖರವಾಗಿ ದಾಖಲಿಸಿ, ಎಣಿಕೆ ಮಾಡಲಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲಾಗುವುದಿಲ್ಲ ಎಂದರು.ಇಸ್ರೋದಲ್ಲಿ ಕುಳಿತ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿ, ಇಲ್ಲಿಂದಲೇ ರಿಮೋಟ್ ಕಂಟ್ರೋಲ್ ಮಾಡಿ ನಿಗದಿತ ಕಕ್ಷೆಯಲ್ಲಿಯೇ ಲ್ಯಾಂಡಿಂಗ್ ಮಾಡಿಸುವ, ಫೋಟೋ ಕ್ಲಿಕ್ಕಿಸುವ, ಸಂಶೋಧನೆ ಮಾಡುವುದನ್ನು ನಿಯಂತ್ರಿಸುವ ತಂತ್ರಜ್ಞಾನವಿರುವಾಗ ಒಂದು ಇವಿಎಂನಲ್ಲಿ ಇರತಕ್ಕಂತಹ ಒಂದು ಸಣ್ಣ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಬದಲಿಸಿ ಚಲಾವಣೆಯಾದ ಮತಗಳ ಅದಲು ಬದಲು ಮಾಡಲಾಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಇದೆ. ಮತದಾನಕ್ಕೆ ಗೊಂದಲ ಮತ್ತು ಅನುಮಾನ ಇರಬಾರದು. ಇಂಥಹವರಿಗೆ ಮತದಾನ ಮಾಡಿದ್ದೆನಂಬ ಖಚಿತತೆ ಮತದಾರನಿಗೆ ಬೇಕಾಗುತ್ತದೆ. ಇಲ್ಲವಾದರೆ ಮತದಾನದ ಹಕ್ಕು ಮತ್ತು ಪ್ರಾಮುಖ್ಯತೆ ಹಾಳಾಗುತ್ತದೆ ಎಂದರು.
ಚುನಾವಣೆ ಪ್ರಕ್ರಿಯೆ ಸತ್ಯ ಮತ್ತು ನಿಷ್ಪಕ್ಷಪಾತವಾಗಿ ಇರಬೇಕಾದರೆ ಚಲಾವಣೆಯಾದ ಮತಗಳನ್ನು ಮೊದಲು ದಾಖಲಿಸಬೇಕು. ನಂತರ ವಿವಿಪ್ಯಾಟ್‌ನಲ್ಲಿ ಫ್ರಿಂಟಾಗಿ ಬರುವ ಸ್ಲಿಪ್ಪನ್ನು ಮತದಾರರಿಗೆ ತೋರಿಸಬೇಕು ಮತ್ತು ಪರಿಶೀಲನೆಗಾಗಿ ಮತದಾರರ ಕೈಗೆ ವಿವಿಪ್ಯಾಟ್ ಮತದ ಚೀಟಿ ನೀಡಬೇಕು. ಮತಗಳ ಅಂತಿಮ ಎಣಿಕೆಗಾಗಿ ಈ ಚೀಟಿ ಸಂರಕ್ಷಿಸಬೇಕು. ಅಂತಿಮವಾಗಿ ಈ ಭೌತಿಕ ಚೀಟಿಗಳ ಮುಖಾಂತರವೇ ಮತಗಳ ಎಣಿಕೆ ನಡೆಯಬೇಕು. ಎರಡಕ್ಕಿಂತ ಹೆಚ್ಚು ಕಡೆ ಚುನಾವಣೆ ಇಲ್ಲದಿದ್ದರೆ ಎಲ್ಲಾ ಹಂತಗಳಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಮಾತ್ರ ಚುನಾವಣೆ ನಡೆಸಬೇಕು.ಚುನಾವಣೆ ಎಂದರೆ ಸುಲಲಿತವಾಗಿ ಮುಗಿಸಿ ಕೈ ತೊಳೆದುಕೊಳ್ಳುವುದಲ್ಲ. ಬದಲಿಗೆ 140 ಕೋಟಿ ಜನರ ಭವಿಷ್ಯ ಅಡಗಿದೆ. ದೇಶದ ಭದ್ರತೆ, ಅಖಂಡತೆ ಅಡಗಿರುತ್ತದೆ. ಏನೇ ಕಷ್ಟವಾದರೂ ಚುನಾವಣೆಗಳು ಗೊಂದಲಕ್ಕಾಗಲಿ, ಸ್ವಪ್ರತಿಷ್ಠವಾಗಲಿ ಅವಕಾಶವಿಲ್ಲದಂತೆ ಸರ್ವಸಮ್ಮತ-ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವುದು, ಭಾರತದ ಪ್ರಜಾಪ್ರಭುತ್ವದ ಉಳಿವಿಗೆ ಅತಿ ಮುಖ್ಯ. ತುರ್ತಾಗಿ ಈ ಬಗ್ಗೆ ರಾಷ್ಟ್ರದಾದ್ಯಂತ ಒಮ್ಮತದ ಅಭಿಪ್ರಾಯ ಮೂಡಬೇಕಾಗಿದೆ ಎಂದರು.
ಕೋಟೆ ನಾಡು ಬುದ್ಧ ವಿಹಾರದ ಕಾರ್ಯಾಧ್ಯಕ್ಷ ಬಿ.ಪಿ ಪ್ರೇಮನಾಥ್, ನಿವೃತ್ತ ನಗರಸಭಾ ಆಯುಕ್ತ ಗುಬ್ಬಿ ಹನುಮಂತಪ್ಪ, ಉಪನ್ಯಾಸಕರಾದ ಈ ನಾಗೇಂದ್ರಪ್ಪ, ನೀತಿಗೆರೆ ಮಂಜಪ್ಪ ಮಾತನಾಡಿದರು. ಬಿ ಎಸ್ ಐ ಜಿಲ್ಲಾ ಖಜಾಂಚಿ ಭೀಮನ ಕೆರೆ ತಿಪ್ಪೇಸ್ವಾಮಿ, ಜಗದೀಶ್ , ಚಳ್ಳಕೆರೆಯ ಕರಿಬಸಪ್ಪ , ನಿಸರ್ಗ ಟ್ರಸ್ಟ್ ನ ದುರ್ಗೇಶ ಭಾಗವಹಿಸಿದ್ದರು.