ಸಾರಾಂಶ
ಕಾಫಿ ತೋಟದಲ್ಲಿ ಬೆಳಿಗ್ಗೆ ತಿಂಡಿ ತಿನ್ನುವ ವೇಳೆಯಲ್ಲಿ ಆನೆ ದಾಳಿ, ಸ್ಥಳೀಯರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ಮೇಲೆ ಬುಧವಾರ ಕಾಡಾನೆ ದಾಳಿ ನಡೆಸಿದ್ದು, ಗಾಳಿಗುಂಡಿ ಗ್ರಾಮದ ಮೋಹನ್ ಅವರ ಪುತ್ರಿ ಮೀನಾ (29) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಆಲ್ದೂರು ಸಮೀಪದ ಗಾಳಿಗುಂಡಿ ಗ್ರಾಮದಿಂದ ಹೆಡದಾಳು ಗುಡ್ಡದಕೆರೆ ಬಳಿಯ ಕಾಫಿ ತೋಟದ ಕೆಲಸಕ್ಕೆ ಬುಧವಾರ ಬೆಳಗ್ಗೆಯೇ ಆರು ಮಂದಿ ಹೋಗಿದ್ದರು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಉಪಾಹಾರವನ್ನು ಕೆಲಸ ಆರಂಭಿಸುವ ಮೊದಲೆ ತಿನ್ನಲು ಒಟ್ಟಿಗೆ ನಾಲ್ವರು ಯುವತಿಯರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಂದ ಆನೆಯನ್ನು ನೋಡಿದ ಎಲ್ಲರೂ ಓಡಿದರು. ಆದರೆ, ಮೀನಾ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೀನಾ ಅವರ ತಲೆಯ ಮೇಲೆ ಆನೆ ಕಾಲಿಟ್ಟಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹ ನೋಡಿದ ಮತ್ತೊಬ್ಬ ಮಹಿಳೆ ಚಂದ್ರಿ (52) ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದು, ಅವರನ್ನು ಆಲ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಿವಾಹಿತ ಮೀನಾ ಅವರೇ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಿರಿಯ ಸಹೋದರಿಯನ್ನು ಮದುವೆ ಕೂಡ ಮಾಡಿದ್ದರು. ಕಿರಿಯ ಸಹೋದರ ಮತ್ತು ತಂದೆಗೆ ಮೀನಾ ಅವರ ದುಡಿಮೆಯೇ ಆಧಾರವಾಗಿತ್ತು. ಕಾಫಿ ಹಣ್ಣು ಕೊಯ್ಲು ಕಾಲ ಆಗಿರುವುದರಿಂದ ಬೆಳಗ್ಗೆ ಏಳು ಗಂಟೆಯಷ್ಟರಲ್ಲೇ ಕೆಲಸಕ್ಕೆ ಹೋಗಿದ್ದರು. ಮೀನಾ ಸಾವಿನ ಸುದ್ದಿ ತಿಳಿದು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ ವೇಳೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಆನೆಯನ್ನು ಈ ಪ್ರದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿದರು.ಪೋಟೋ ಫೈಲ್ ನೇಮ್ 8 ಕೆಸಿಕೆಎಂ 2ಮೀನಾ ------------------ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರು. ಪರಿಹಾರ ವಿತರಿಸಲು ಸಿಎಂ ಸೂಚನೆಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆಯ ಹೆಡದಾಳು ಗ್ರಾಮದ ಬಳಿ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಮಹಿಳೆ ಮೀನಾ ಅವರ ಸಾವಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಕ್ಷಣ 15 ಲಕ್ಷ ರು. ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಜಿ ಸಚಿವ ಡಿ.ಬಿ. ಚಂದ್ರೆಗೌಡರ ಅಂತಿಮ ದರ್ಶನ ಪಡೆದ ಬಳಿಕ ಮೂಡಿಗೆರೆಯಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಯವರು ತುರ್ತು ಸಭೆ ನಡೆಸಿದರು. ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಮೃತ ಮೀನಾ ಅವರ ಮೃತದೇಹ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಜತೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾಡಾನೆ ಹಾವಳಿ ತಪ್ಪಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದೇನೆ ಎಂದರು. ಅರಣ್ಯ ಸಚಿವರೂ ಇಲ್ಲಿಗೆ ಬಂದು ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳುತ್ತಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೇ ಫೆನ್ಸಿಂಗ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಿದ್ದೇನೆ ಎಂದು ಹೇಳಿದರು. ಪಂಚಾಯ್ತಿ ಮಟ್ಟದಲ್ಲಿ, ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಕೇಂದ್ರದಲ್ಲಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ ಅವರು, ರೈತರಿಗೆ ಪ್ರತಿನಿತ್ಯ ತ್ರಿಫೇಸ್ 7 ಗಂಟೆ ವಿದ್ಯುತ್ ನೀಡಲು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನ ತಪ್ಪಿಸದಂತೆ ಖಡಕ್ ಸೂಚನೆ ನೀಡಿದರು. ಪಿಡಿಒಗಳು ಪಂಚಾಯ್ತಿ ಕರ್ತವ್ಯ ಕೇಂದ್ರದಲ್ಲೇ ಉಳಿದು ಕರ್ತವ್ಯ ನಿರ್ವಹಿಸಬೇಕು. ತಾಲ್ಲೂಕು ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರಗಳಲ್ಲೇ ಉಳಿಯಬೇಕು. ಸಾರ್ವಜನಿಕರ ಜತೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಆಲಿಸಬೇಕು ಎಂದು ತಿಳಿಸಿದರು.