ತೋಟದಲ್ಲಿ ಒಂಟಿ ಸಲಗ ದಾಂದಲೆ: ಅಪಾರ ನಷ್ಟ

| Published : Jul 02 2024, 01:41 AM IST

ಸಾರಾಂಶ

ಕಾಫಿ ತೋಟಗಳಲ್ಲಿ ಒಂಟಿ ಸಲಗ ದಾಳಿ ನಡೆಸಿದೆ. ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ಹಾನಿಯಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕಾಫಿ ತೋಟಗಳಲ್ಲಿ ಒಂಟಿ ಸಲಗ ಒಂದು ದಾಂದಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲುಗಳು ಹಾನಿಯಾಗಿರುವ ಘಟನೆ ವಿರಾಜಪೇಟೆ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಒಂದು ದಾಂದಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲುಗಳು ನಷ್ಷವಾಗಿರುತ್ತದೆ. ಗ್ರಾಮದ ನಿವಾಸಿಯಾಗಿರುವ ಎ.ಎಚ್. ಸರಸ್ವತಿ ಮತ್ತು ಟೋಮಿ ಎಂಬುವವರಿಗೆ ಸೇರಿದ ಕಾಫಿ ತೋಟಗಳಲ್ಲಿ ಒಂಟಿ ಸಲಗವೊಂದು ನಿರಂತರವಾಗಿ ದಾಂದಲೆ ನಡೆಸುತ್ತಿದ್ದು. ಕಾಫಿ ಗಿಡಗಳು ಸೇರಿದಂತೆ ತೆಂಗು, ಅಡಕೆ, ಮತ್ತು ಬಾಳೆ ಗಿಡಗಳನ್ನು ಧ್ವಂಸ ಮಾಡಿ ಹಿಂದಿರುಗಿದೆ. ಅಲ್ಲದೆ ವಿದ್ಯುತ್ ಪರಿವರ್ತಕದಿಂದ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯನ್ನು ತುಂಡರಿಸಿದೆ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೆ ವಿದ್ಯುತ್ ಪೂರೈಕೆಯಾಗುತ್ತಿರುವ ತಂತಿಯು ನೆಲೆದ ಮೇಲಿರುವ ಕಾರಣ ಕಾರ್ಮಿಕರು ಮತ್ತು ಇತರರು ಭಾಗಕ್ಕೆ ತೆರಳಲು ಹಿಂದೇಟು ಹಾಕುತಿದ್ದಾರೆ. ಚೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಿಬ್ಬಂದಿ ಕಳುಹಿಸುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಕಾಡಾನೆ ದಾಳಿಯಿಂದ ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರಾದ ಎ.ಎಚ್. ಸರಸ್ವತಿ ಅವರು ಮಾಹಿತಿ ನೀಡಿದರು.

ಒಂದನೇ ರುದ್ರಗುಪ್ಪೆ ಮತ್ತು ಈ ಭಾಗದ ಇತರ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಮಾಡಿದರು. ಕಾಡಾನೆಗಳು ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ತೋಟಗಳನ್ನು ಹಾನಿ ಪಡಿಸಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯು ಕಾಡಾನೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ.