ಮದೆನಾಡು ಗ್ರಾಮದಲ್ಲಿ ಕಾಡಾನೆ ಹಿಂಡು ದಾಂದಲೆ: ಕೃಷಿ ನಷ್ಟ

| Published : Jul 22 2024, 01:20 AM IST

ಸಾರಾಂಶ

ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಹಾನಿ ಉಂಟು ಮಾಡಿದೆ. ಮನೆಯಿಂದ ಹೊರಹೋಗಲು ಗ್ರಾಮಸ್ಥರು ಭಯಪಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮದೆನಾಡು ಗ್ರಾಮದ ಸಾಲಾಪು ಸಮೀಪದ ಪಟ್ಟಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಶನಿವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಹಾನಿ ಉಂಟಾಗಿದೆ. ಬಾಳೆ, ಅಡಕೆ, ತೆಂಗು, ಕಾಫಿ ಗಿಡಗಳನ್ನು ತುಳಿದು ದ್ವಂಸ ಮಾಡಿವೆ. ಕಾಡಾನೆಗಳ ಹಿಂಡು ಜನ ವಸತಿ ಸಮೀಪದಲ್ಲೇ ಹಾದು ಹೋಗಿರುವುದರಿಂದ ಮನೆಯಿಂದ ಹೊರ ಹೋಗಲು ಗ್ರಾಮಸ್ಥರು ಭಯಗೊಂಡಿದ್ದಾರೆ.

ಶನಿವಾರ ರಾತ್ರಿ ಪಟ್ಟಡ ಕುಟುಂಬಸ್ಥರ ತೋಟಗಳಿಗೆ ಆನೆಗಳು ದಾಳಿ ಮಾಡಿದ್ದು, ಕಾಫಿ ಗಿಡಗಳ ರೆಂಬೆಗಳನ್ನು ಮುರಿದು ಹಾಕಿವೆ. 30 ವರ್ಷದ ಫಲಭರಿತ ತೆಂಗು, ಬಾಳೆಗಳನ್ನು ತುಳಿದು ನಾಶಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯವರು ಹಾಗೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಡಾನೆ ದಾಳಿಯಿಂದ ಫಸಲುಭರಿತ ಗಿಡಗಳು ನಷ್ಟವಾಗಿವೆ. ಸುಮಾರು ನೂರು ಕಾಫಿ ಗಿಡಗಳು ಧ್ವಂಸವಾಗಿವೆ. ತೋಟದ ಕೃಷಿ ಫಸಲನ್ನು ಸಂಪೂರ್ಣ ನಾಶಪಡಿಸಿವೆ. ಇದರಿಂದಾಗಿ ಗ್ರಾಮದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು ಎಂದು ಸಾಲಾಪು ಮದೆನಾಡು ಗ್ರಾಮ ಪಟ್ಟಡ ಧನಂಜಯ ಹೇಳಿದರು.

ಶನಿವಾರ ರಾತ್ರಿ 7.30ರ ಅಂದಾಜಿಗೆ ತೋಟಕ್ಕೆ ದಾಳಿ ಇಟ್ಟ ಕಾಡಾನೆಗಳು ಹಲವು ಕಾಫಿ ಗಿಡಗಳನ್ನು ಬಾಳೆ, ಅಡಕೆ, ತೆಂಗಿನ ಮರಗಳನ್ನು ನಾಶಪಡಿಸಿವೆ. ಕಷ್ಟಪಟ್ಟು ಬೆಳೆಸಿದ ಕೃಷಿ ನಷ್ಟವಾಗಿದೆ. ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸಾಲಾಪು ಮದೆನಾಡು ಗ್ರಾಮ ಪಟ್ಟಡ ರತ್ನಾವತಿ ತಿಳಿಸಿದರು.