ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಮಲೆನಾಡು ಭಾಗದ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಮಲಸಾವರ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ನುಗ್ಗಿ ಓಡಾಡಿದ ಘಟನೆ ನಡೆದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.ಕಳೆದ ರಾತ್ರಿ ಗ್ರಾಮಾಂತರ ಪ್ರದೇಶಕ್ಕೆ ಬಂದ ಆನೆಗಳು ಹೊಲ ಜಮೀನು ಹಾಗೂ ತೋಟಗಳ ದಾರಿ ಹಿಡಿದ ಪರಿಣಾಮ ಭಯದಿಂದ ಗ್ರಾಮಸ್ಥರು ಮನೆಬಾಗಿಲು ಬೀಗ ಹಾಕಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಯಿತು. ಪ್ರತಿ ರಾತ್ರಿ ಆನೆಗಳ ಚಲನವಲನ ಹೆಚ್ಚುತ್ತಿದೆ. ಹೊಲದಲ್ಲಿ ಬೆಳೆದಿರುವ ಬೆಳೆಗಳು ನಾಶವಾಗುವ ಪರಿಸ್ಥಿತಿ ಬಂದಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆಗಳನ್ನು ಹಿಮ್ಮೆಟ್ಟಿಸದಿದ್ದರೆ ಗ್ರಾಮಸ್ಥರಿಗೆ ಬದುಕು ಕಷ್ಟವಾಗುತ್ತದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಗ್ರಾಮದಲ್ಲಿ ಆನೆಗಳ ಚಲನವಲನ ಕಂಡುಬಂದಿದೆ ಎಂಬ ಮಾಹಿತಿ ನಮಗೆ ಲಭಿಸಿದೆ. ತಕ್ಷಣ ಸಿಬ್ಬಂದಿಯನ್ನು ಕಳುಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗುವುದು. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಅಗತ್ಯವಿದ್ದರೆ ಪಟಾಕಿ ಸಿಡಿಸುವ ಮೂಲಕ ಹಾಗೂ ಗಸ್ತು ಬಿಗಿಗೊಳಿಸುವ ಮೂಲಕ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.