ಸಾರಾಂಶ
ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾಟುಕೊಡಿಗೆ ಗ್ರಾಮದಲ್ಲಿ ಗುರುವಾರ ಕಾಡಾನೆಯೊಂದು ಹಲವು ರೈತರ ಜಮೀನುಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ.ವಾಟುಕೊಡಿಗೆ ಗ್ರಾಮದ ರೈತರಾದ ಧರ್ಮಪಾಲ್, ಆನಂದ್, ಸುಧಾಕರ್, ಜ್ಞಾನದಾತ, ಶ್ರೀನಿವಾಸ್, ಚಂದ್ರಶೇಖರ್ ಎಂಬುವರ ಜಮೀನಿಗೆ ರಾತ್ರಿ ವೇಳೆಯಲ್ಲಿ ದಾಳಿ ಮಾಡಿರುವ ಕಾಡಾನೆ ಬಾಳೆ, ಅಡಕೆ, ಕಾಫಿ, ತೆಂಗಿನ ಮರಗಳನ್ನು ಧರೆ ಗುರುಳಿಸಿ ಹಾನಿ ಮಾಡಿದೆ.ರೈತರ ಜಮೀನಿಗೆ ದಾಳಿಯಿಟ್ಟಿರುವ ಕಾಡಾನೆ ಜಮೀನಿನ ಒಳಗೆ ಮನಬಂದಂತೆ ತಿರುಗಾಡಿದ್ದು, ಫಸಲುಭರಿತವಾಗಿದ್ದ ಅಡಕೆ, ಬಾಳೆ, ಕಾಫಿ ಗಿಡಗಳು ಸಂಪೂರ್ಣವಾಗಿ ನೆಲಕಚ್ಚಿವೆ. ರೈತರ ಜಮೀನಿನಲ್ಲಿದ್ದ ಗೇಟು, ಕಂಪೌಂಡ್ ಸೇರಿದಂತೆ ಹಲವು ಕೃಷಿ ಉಪಕರಣಗಳನ್ನು ಸಹ ಹಾನಿ ಮಾಡಿದೆ.ಆನೆ ದಾಳಿಯಿಂದ ರೈತರಿಗೆ ಲಕ್ಷಾಂತರ ಮೌಲ್ಯದ ಫಸಲು ನಷ್ಟವಾಗಿದ್ದು, ಅರಣ್ಯ ಇಲಾಖೆ ಕೂಡಲೇ ಗ್ರಾಮಕ್ಕೆ ಬಂದಿರುವ ಆನೆಯನ್ನು ಬೇರೆಡೆಗೆ ಓಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಡಿಆರ್‌ಎಫ್‌ಒ ಆದಿತ್ಯರಾವ್, ಅರಣ್ಯ ರಕ್ಷಕ ಪ್ರಭು ಭೇಟಿ ನೀಡಿ ಪರಿಶೀಲಿಸಿದ್ದಾರೆ.೦೨ಬಿಹೆಚ್‌ಆರ್ ೪:
ಬಾಳೆಹೊನ್ನೂರು ಸಮೀಪದ ವಾಟುಕೊಡಿಗೆಯಲ್ಲಿ ಆನೆ ದಾಳಿ ಮಾಡಿ ನೆಲಕಚ್ಚಿರುವ ತೆಂಗಿನ ಮರ.