ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಗುಂಪಿನಲ್ಲಿದ್ದ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಆಲ್ದೂರು ಸಮೀಪದ ಪುರ ಗ್ರಾಮದ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.ಸುಮಾರು 30 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದೆ. ಕಳೆದ ಆರು ದಿನಗಳ ಹಿಂದೆ ಸಕಲೇಶಪುರದಿಂದ ಚೀಕನಹಳ್ಳಿ ಮೂಲಕ ಮೂಡಿಗೆರೆ ಮಾರ್ಗವಾಗಿ ಬಂದಿರುವ ಸುಮಾರು 20 ಕಾಡಾನೆಗಳು ತಾಲೂಕಿನ ತುಡುಕೂರು ಗ್ರಾಮದ ಬಳಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದವು. ಗುರುವಾರ ರಾತ್ರಿ ಬತ್ತದ ಗದ್ದೆಗಳು, ನೀರೆತ್ತುವ ಮೋಟಾರ್, ಪೈಪ್ ಲೈನ್‌ಗಳನ್ನು ಹಾಳು ಮಾಡಿದ್ದವು.
ಶನಿವಾರ ಬೆಳಿಗ್ಗೆ ಈ ಗುಂಪು ಆಲ್ದೂರು ಸಮೀಪದ ಪುರ ಗ್ರಾಮದ ಕಡೆಗೆ ತೆರಳುವ ಸಂದರ್ಭದಲ್ಲಿ ಕಾಫಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು.ಕಾಡಾನೆಗಳು ಓಡಾಡುತ್ತಿರುವುದರಿಂದ ಆಲ್ದೂರು, ಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯಿಂದ ಎಚ್ಚರವಹಿಸುವಂತೆ ಪ್ರಚುರಪಡಿಸಲಾಗುತ್ತಿದೆ. ಆನೆಗಳ ಚಲನವಲನದ ಮೇಲೆ ಕಣ್ಣಿಡಲು 25 ಮಂದಿ ಸಿಬ್ಬಂದಿಯಳನ್ನು ನಿಯೋಜನೆ ಮಾಡಲಾಗಿದೆ.
--- ಬಾಕ್ಸ್-- ಕಾಡು ಕೋಣ ತಿವಿದು ಇಬ್ಬರಿಗೆ ಗಾಯ:ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡು ಕೋಣ ತಿವಿದು ಇಬ್ಬರಿಗೆ ಗಾಯವಾಗಿರುವ ಘಟನೆ ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಬಿದರೆ ಗ್ರಾಮದ ಡೆನ್ವಿರ್ ಅಂಡ್ರೋ ರವರ ಲಿಲ್ಲಿ ಖಾನ್ ಎಸ್ಟೇಟ್ ನ ಮೇಸ್ತ್ರಿ ರಾಜು ಹಾಗೂ ಅಸ್ಸಾಂ ಮೂಲದ ಕ್ಯಾರೋ ಎಂಬುವವರಿಗೆ ಗಾಯಗಳಾಗಿವೆ.ಎಸ್ಟೇಟ್‌ನಲ್ಲಿ ರಾಜು ಸೇರಿದಂತೆ ಅಸ್ಸಾಂ ಮೂಲದ 3 ಮಂದಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದು ಕಾಡು ಕೋಣ ರಾಜು ಹಾಗೂ ಕ್ಯಾರೋ ಅವರಿಗೆ ಕೊಂಬಿನಿಂದ ತಿವಿದಿದೆ. ಇನ್ನುಳಿದ ಇಬ್ಬರು ಸ್ಥಳದಿಂದ ಓಡಿ ಹೋಗಿದ್ದಾರೆ. ಗಾಯ ಗೊಂಡಿರುವವರಿಗೆ ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
--ಕರಡಿ ದಾಳಿ- ಪರಿಹಾರಕ್ಕೆ ಆಗ್ರಹ:ಕರಡಿ ದಾಳಿಯಿಂದ ಗಾಯಗೊಂಡಿರುವ ಕಳಸ ತಾಲೂಕಿನ ಸಂಸೆ ಗ್ರಾಮದ ಬಿಳಿಗಲ್ ಗ್ರಾಮದ ಸತೀಶ್ ಅವರಿಗೆ ಪರಿಹಾರ ನೀಡಬೇಕೆಂದು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಸತೀಶ್ ಅವರಿಗೆ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆಯಾಗಿದೆ. ಹಾಗಾಗಿ ಪರಿಹಾರ ನೀಡಬೇಕು. ಹಾಗೂ ದಾಳಿ ನಡೆಸಿರುವ ಕರಡಿಯನ್ನು ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಿದರು.ಮನವಿ ಸಲ್ಲಿಸಿದ ಸಂದರ್ಭದಲ್ಲಿ ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಅನಿಲ್ ಕುಮಾರ್ ಮುಜೆಕಾನು, ಗಣೇಶ್ ಕುಕ್ಕೊಡು, ಸುರೇಶ್ ಕೆರ್ನಳಿ, ದಿನೇಶ್ ಎಸ್.ಕೆ. ಮೆಗಾಲ್, ಸತೀಶ್ ಒಡ್ಡಿಕಟ್ಟೆ ಇದ್ದರು. 9 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಪುರ ಗ್ರಾಮದ ಬಳಿ ಶನಿವಾರ ಮಧ್ಯಾಹ್ನ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕಾಡಾನೆ.