ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ಕಾವೇರಿ ನದಿ ತಟದಲ್ಲಿ ಎರಡು ಸಾಕಾನೆಗಳ ನಡುವೆ ನಡೆದ ಕಾಳಗದಲ್ಲಿ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಚೆನ್ನೈನ ಪಲ್ಲಾವರಂ ಮೂಲದ ಜೊಯಲ್ ಎಂಬವರ ಪತ್ನಿ ಜುನ್ಶಿ(33) ಮೃತ ಪಟ್ಟ ಮಹಿಳೆ.
ಕುಶಾಲನಗರ: ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ಕಾವೇರಿ ನದಿ ತಟದಲ್ಲಿ ಎರಡು ಸಾಕಾನೆಗಳ ನಡುವೆ ನಡೆದ ಕಾಳಗದಲ್ಲಿ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಚೆನ್ನೈನ ಪಲ್ಲಾವರಂ ಮೂಲದ ಜೊಯಲ್ ಎಂಬವರ ಪತ್ನಿ ಜುನ್ಶಿ(33) ಮೃತ ಪಟ್ಟ ಮಹಿಳೆ. ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ಮಾರ್ತಾಂಡ ಮತ್ತು ಕಂಜನ್ ಎಂಬ ಆನೆಗಳ ನಡುವೆ ಘರ್ಷಣೆ ಉಂಟಾಗಿ ಈ ದುರಂತ ಸಂಭವಿಸಿದೆ.ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಶಿಬಿರದ ಸಾಕಾನೆಗಳಾದ ಮಾರ್ತಾಂಡ ಮತ್ತು ಕಂಜನ್ ಎಂಬ ಎರಡು ಆನೆಗಳನ್ನು ನದಿಗೆ ಕರೆತರಲಾಗಿತ್ತು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ಸ್ನಾನ ಮಾಡಿಸಲು ನೀರಿಗೆ ಇಳಿಸುತ್ತಿದ್ದರು. ಈ ವೇಳೆ ಮಾರ್ತಾಂಡ ಆನೆಯನ್ನು ನೀರಿಗೆ ಸ್ವಲ್ಪ ಜೋರಾಗಿ ಇಳಿಸಿದಾಗ, ಅದು ಪಕ್ಕದಲ್ಲಿದ್ದ ಕಂಜನ್ ಆನೆಗೆ ತಗುಲಿದೆ ಎನ್ನಲಾಗಿದೆ.
ತನ್ನ ದೇಹಕ್ಕೆ ಮಾರ್ತಾಂಡ ಆನೆ ಸ್ಪರ್ಶಿಸುತ್ತಿದ್ದಂತೆಯೇ ಕಂಜನ್ ಆನೆ ವಿಪರೀತ ಆಕ್ರೋಶಗೊಂಡಿದೆ. ತಕ್ಷಣವೇ ಮಾರ್ತಾಂಡನ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಎರಡು ಬೃಹತ್ ಆನೆಗಳ ನಡುವೆ ಇದ್ದಕ್ಕಿದ್ದಂತೆ ಶುರುವಾದ ಈ ಘರ್ಷಣೆಯಿಂದಾಗಿ ಅಲ್ಲಿದ್ದ ಪ್ರವಾಸಿಗರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಆದರೆ, ದುರದೃಷ್ಟವಶಾತ್ ಪ್ರವಾಸಿ ಮಹಿಳೆ ಜಿನ್ಶಿ ಅವರು ಆನೆಗಳ ಜಗಳದ ರಭಸಕ್ಕೆ ಸಿಲುಕಿದ್ದಾರೆ. ಆನೆಯ ಕಾಲಡಿ ಸಿಲುಕಿದ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ಆಕೆಯ ಪತಿ ಜೊಯಲ್ ಕೂಡ ಮೂರು ವರ್ಷದ ಮಗಳನ್ನು ಎತ್ತಿಕೊಂಡು ಪತ್ನಿಯನ್ನು ಎಳೆಯಲು ಯತ್ನಿಸಿದ್ದಾರೆ. ಆದರೆ ಕಂಜನ್ ನಿರಂತರ ದಾಳಿ ಮಾಡಿದ ಹಿನ್ನೆಲೆಯಲ್ಲಿ ಆಕೆಯನ್ನು ಮೇಲೆತ್ತಲು ಸಾಧ್ಯವಾಗಲೇ ಇಲ್ಲ. ಇದರಿಂದ ಸ್ಥಳದಲ್ಲೇ ಪ್ರವಾಸಿ ಮಹಿಳೆ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಪತಿ ಜೊಯಲ್ ಅವರ ಕಾಲಿಗೂ ಗಂಭೀರ ಗಾಯವಾಗಿದೆ. ಸಿಬ್ಬಂದಿಗಳು ಗಾಯಾಳು ಮಹಿಳೆಯನ್ನು ರ್ಯಾಫ್ಟಿಂಗ್ ಮೂಲಕ ದಡಕ್ಕೆ ಸಾಗಿಸಿದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು. ಮಹಿಳೆಯ ಮರಣೋತ್ತರ ಪರೀಕ್ಷೆಯ ಬಳಿಕ ತಮ್ಮ ಊರಿಗೆ ಮೃತದೇಹವನ್ನು ಸಾಗಿಸಲಾಯಿತು.