ಕಾರ್ಕಳ: ಹೆಬ್ರಿ ತಾಲೂಕಿನಲ್ಲಿ ಮತ್ತೆ ಆನೆ ಕಾಟ ಆರಂಭವಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತೆಂಗುಮಾರ್ ಲಕ್ಷ್ಮಣ ಗೌಡ, ಆನಂದ ಗೌಡ ಹಾಗೂ ಪೀತಬೈಲು ಜಯಂತ ಗೌಡ ಅವರ ತೋಟಗಳಿಗೆ ಶುಕ್ರವಾರ ರಾತ್ರಿ ಆನೆ ದಾಳಿ ನಡೆಸಿ ತೋಟವನ್ನು ಸಂಪೂರ್ಣ ಹಾನಿಗೊಳಿಸಿದೆ.

ಅಡಿಕೆ ಮರಗಳು, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ರಾತ್ರಿ ವೇಳೆ ಕಬ್ಬಿನಾಲೆ ಭಾಗಗಳಲ್ಲಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿರುವುದರಿಂದ ಮಲೆನಾಡು ಪ್ರದೇಶದ ಕುಟುಂಬಗಳು ತೊಂದರೆಗೊಳಗಾಗಿವೆ. ರಾತ್ರಿ ಹೊತ್ತಿನಲ್ಲಿ ಸಂಚರಿಸುವುದಕ್ಕೂ ಜನರು ಹಿಂಜರಿಯುತ್ತಿದ್ದಾರೆ.ಕೆಲವು ವರ್ಷಗಳ ಹಿಂದೆ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್‌ಎಫ್ ಗುಂಡಿಗೆ ಬಲಿಯಾದ ಬಳಿಕ ಪರಿಸ್ಥಿತಿ ಸ್ವಲ್ಪ ಶಾಂತವಾಗಿದ್ದರೂ ಇದೀಗ ಮತ್ತೆ ಆನೆ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಇದು ಸುಮಾರು ಹನ್ನೆರಡು ವರ್ಷದ ಸಣ್ಣ ಆನೆ ಎಂದು ಅಂದಾಜಿಸಲಾಗಿದೆ.ಗುಡ್ಡಗಾಡು ಪ್ರದೇಶಗಳಲ್ಲಿ ಹಲಸು ಮತ್ತು ಮಾವಿನ ಋತುವಿನ ವೇಳೆ ಆನೆಗಳು ಹೆಚ್ಚು ಸಂಚರಿಸುತ್ತವೆ. ಕಬ್ಬಿನಾಲೆ ಪ್ರದೇಶದ ವಾಲಿಕುಂಜ ಗುಡ್ಡದ ಮೇಲ್ಭಾಗದಲ್ಲಿ ಈ ಆನೆ ಕಾಣಿಸಿಕೊಂಡಿದ್ದು, ಗೇಮ್ ರೋಡ್ ಮೂಲಕ ಮಲೆನಾಡಿನ ತಪ್ಪಲು ಪ್ರದೇಶಗಳಾದ ಕಬ್ಬಿನಾಲೆ, ನಾಡ್ಪಾಲು, ಚಾರ, ವರಂಗ, ಅಂಡಾರು ಹಾಗೂ ಕಾರ್ಕಳ ತಾಲೂಕಿನ ಶಿರ್ಲಾಲು, ಕೆರುವಾಶೆ ಭಾಗಗಳಲ್ಲಿ ಸಂಚರಿಸುತ್ತಿದೆ.ಕಳೆದ ಬಾರಿ ಆನೆ ದಾಳಿಯಿಂದ ಕೆರೆಕಟ್ಟೆಯಲ್ಲಿ ಹರೀಶ್ ಶೆಟ್ಟಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆಹಿಡಿಯಲಾಗಿತ್ತು.