ಸಾರಾಂಶ
ಚಿಕ್ಕಮಗಳೂರು- ಮೂಡಿಗೆರೆ ತಾಲೂಕುಗಳಲ್ಲಿ ಆನೆಗಳ ಉಪಟಳ, ಚಿಕ್ಕಮಗಳೂರು ಹೊರ ವಲಯದಲ್ಲಿ ಬಿಡಾರ ಹೂಡಿರುವ ಗಜಪಡೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಡಾನೆಗಳ ಹಾವಳಿಗೆ ಮಲೆನಾಡು ತತ್ತರಿಸುತ್ತಿದೆ. ಎಲ್ಲಿ ನೋಡಿದರಲ್ಲಿ ಆನೆಗಳದ್ದೆ ಸದ್ದು, ಇವುಗಳ ಉಪಟಳಕ್ಕೆ ಕೆಲವರು ಬಲಿಯಾಗಿದ್ದಾರೆ. ನಡೆದಾಡಿದ ದಾರಿಯಲ್ಲಿ ಫಸಲು ಹಾಳಾಗಿವೆ. ಕಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಗಜ ಪಡೆ, ಇದೀಗ ಜಿಲ್ಲಾ ಕೇಂದ್ರದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ತಮ್ಮ ಮರಿಗಳ ಸಮೇತವಾಗಿ ಬಿಡಾರ ಹೂಡಿವೆ. ಫಸಲು ಉಳಿಸಿಕೊಳ್ಳಲು ರೈತರು, ಜೀವ ಉಳಿಸಿಕೊಳ್ಳಲು ವಸತಿ ಪ್ರದೇಶದಲ್ಲಿನ ಜನರು ಹಗಲಿರುಳು ಭಯ ಭೀತಿಯಲ್ಲೇ ಬದುಕುತ್ತಿದ್ದಾರೆ. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಆನೆಗಳ ಚಲನ ವಲನಗಳ ಮೇಲೆ ನಿಗಾ ಇಡಲು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.ಭುವನೇಶ್ವರಿ ತಂಡ: ಹಲವು ದಿನಗಳಿಂದ 7 ಆನೆಗಳ ಭುವನೇಶ್ವರಿ ತಂಡ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯಲ್ಲಿ ಬೀಡು ಬಿಟ್ಟಿದೆ.
ನ. 8 ರಂದು ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಮೀನಾ ಎಂಬ ಕಾರ್ಮಿಕ ಮಹಿಳೆಯನ್ನು ಒಂಟಿ ಸಲಗ ಬಲಿ ತೆಗೆದುಕೊಂಡಿತ್ತು. ಅದನ್ನು ಹಿಡಿಯಬೇಕೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಸಕ್ರೆಬೈಲು ಹಾಗೂ ನಾಗರಹೊಳೆಯಿಂದ 9 ಸಾಕಾನೆಗಳನ್ನು ಕರೆಸಿ ಆನೆಯ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭುವನೇಶ್ವರಿ ತಂಡದಿಂದ ಬೇರ್ಪಟ್ಟಿರುವ ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆ ಚುರುಕು ಗೊಳ್ಳುತ್ತಿದ್ದಂತೆ 3 ಮರಿಗಳು ಒಳಗೊಂಡ 6 ಆನೆಗಳು ನಲ್ಲೂರು ಕಡೆ ತಮ್ಮ ಪ್ರಯಾಣ ಬೆಳೆಸಿದ್ದವು. ಬುಧವಾರ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯ ಸುಮಾರು 50 ಸಿಬ್ಬಂದಿ ಒಳಗೊಂಡ ನಾಲ್ಕು ತಂಡಗಳು ಪಟಾಕಿ ಸಿಡಿಸಿ ಮತ್ತಾವರದ ಕಡೆಗೆ ಆನೆಗಳನ್ನು ಓಡಿಸಿದ್ದರು. ಅಲ್ಲಿಂದ ಅವುಗಳು ಸಾರಗೋಡು ಕಡೆಗೆ ಹೋಗಿದ್ದರೆ, ತಾವು ಬಂದಿರುವ ರೂಟ್‌ನಲ್ಲಿ ವಾಪಸ್ ತೆರಳುತ್ತಿದ್ದವು. ಆದರೆ, ಬುಧವಾರ ರಾತ್ರಿ ಮತ್ತಾವರದಲ್ಲಿ ಪಟಾಕಿ ಸಿಡಿಸಿದ್ದರಿಂದ ಆನೆಗಳು ಮರಳಿ ನಲ್ಲೂರಿಗೆ ಬಂದು ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ. ಆಗ ಈ ತಂಡದಲ್ಲಿದ್ದ ಆನೆಯೊಂದು ಹುಕ್ಕುಂದ ಗ್ರಾಮದ ಕಡೆಗೆ ಓಡಿ ಹೋಯಿತ್ತೆಂದು ಸ್ಥಳೀಯರು ಹೇಳುತ್ತಿದ್ದಾರೆ. ಆನೆಗಳು ಕಬ್ಬಿನ ಗದ್ದೆಯಲ್ಲಿ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ರಮೇಶ್‌ಬಾಬು ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು, ದ್ರೋಣ್ ಕ್ಯಾಮರ ಸಹಾಯದಿಂದ ಆನೆಗಳು ಇರುವುದು ಖಾತ್ರಿ ಪಡಿಸಿಕೊಂಡರು. ಕಬ್ಬಿನ ಗದ್ದೆಯ ಸುತ್ತ ಮುತ್ತ ಹಾಗೂ ಸಮೀಪದಲ್ಲಿ ಜನ ವಸತಿ ಪ್ರದೇಶ ಇದ್ದರಿಂದ ಅವುಗಳು ಓಡಿಸುವ ಕೆಲಸಕ್ಕೆ ಕೈ ಹಾಕಿದರೆ ಎಡವಟ್ಟು ಆಗಬಹುದೆಂದು ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು.ಶಾಲೆಗಳಿಗೆ ರಜೆ: ಆನೆಗಳ ಸಂಚಾರ ಇರುವುದರಿಂದ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿತ್ತು. ನಲ್ಲೂರು, ಕಲ್ಲೆದೇವರಹಳ್ಳಿ, ಉಂಡೇದಾಸರಹಳ್ಳಿಯಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಗುರುವಾರ ರಜೆ ನೀಡಲಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಪೊಲೀಸ್ ಇಲಾಖೆಯಿಂದ ಬೀದಿಗಳಲ್ಲಿ ಮೈಕ್‌ನಲ್ಲಿ ಪ್ರಚುರ ಪಡಿಸಿ, ಯಾರೂ ಕೂಡ ಮನೆಗಳಿಂದ ವಿನಾಕಾರಣ ಹೊರಗೆ ಬರದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡ ಲಾಯಿತು. ಈ ಆನೆಗಳನ್ನು ಹಿಡಿಯಬೇಕೆಂದು ನಲ್ಲೂರು ಗ್ರಾಮದ ಜನರು ಪ್ರತಿಭಟನೆ ನಡೆಸಿದರು. ಜನರ ಒತ್ತಡ ಹೆಚ್ಚಾಗಿದ್ದರಿಂದ ಆಲ್ದೂರು ವಲಯದಲ್ಲಿ ಕಾರ್ಯಾಚರಣೆಯಲ್ಲಿರುವ ಎರಡು ಆನೆಗಳನ್ನು ಮಧ್ಯಾಹ್ನ 3.15 ಕ್ಕೆ ಕರೆ ತರಲಾಯಿತು. ಅವುಗಳಿಗೆ ನೀರು, ಆಹಾರ ಕೊಟ್ಟು 5 ಗಂಟೆ ವೇಳೆಗೆ ಕಾರ್ಯಾಚರಣೆ ಆರಂಭಿಸಲಾಯಿತು. ಮರಿ ಆನೆಗಳು ಜತೆಯಲ್ಲಿದ್ದರಿಂದ ಇತರೆ ಆನೆಗಳು ಸ್ಪಂದಿಸುವುದು ಅಷ್ಟು ಸುಲಭ ವಲ್ಲ. ಹಾಗಾಗಿ ಸಂಜೆ 6.15 ರ ವೇಳೆಗೆ ಸಾಕಾನೆಗಳನ್ನು ಕಾರ್ಯಾಚರಣೆ ಸ್ಥಳಕ್ಕೆ ವಾಪಸ್ ಕರೆದು ಕೊಂಡು ಹೋಗಲಾಯಿತು. ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಕಷ್ಟವಾಗಲಿದೆ. ಅವುಗಳು ಅಲ್ಲಿಂದ ಓಡಿಸುವುದೊಂದೆ ಪರಿಹಾರ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ----- ಬಾಕ್ಸ್ -----
ಸಾರಗೋಡು ಬಳಿ ಕಾಡಾನೆ ಸೆರೆ ಚಿಕ್ಕಮಗಳೂರು: ಜಿಲ್ಲೆಯ ಸಾರಗೋಡು ಸಮೀಪ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.ಬುಧವಾರ ಮಧ್ಯಾಹ್ನ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆನೆ ಸುಮಾರು 8 ಕಿಲೋ ಮೀಟರ್ ನಷ್ಟು ದೂರ ಸಾಗಿ ಸಾರಗೋಡು ಸಮೀಪ ಅರಣ್ಯದಲ್ಲಿ ಬಿದ್ದಿತ್ತು ಎನ್ನಲಾಗಿದೆ. ನಂತರ ಸಂಜೆ ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಆನೆಯನ್ನು ತಡರಾತ್ರಿ ಲಾರಿಗೆ ತುಂಬಿಸಿ ಒಂದು ದಿನ ವಿಶ್ರಾಂತಿ ಬಳಿಕ ಸಕ್ರೆಬೈಲು ಬೀಡಾರಕ್ಕೆ ಎರಡು ಸಾಕಾನೆಗಳ ನೆರವಿನಿಂದ ಗುರುವಾರ ಕರೆದುಕೊಂಡು ಹೋಗಲಾಯಿತು.
16 ಕೆಸಿಕೆಎಂ 2ಸಾರಗೋಡು ಸಮೀಪ ಕಾಡಾನೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದರು.
--16 ಕೆಸಿಕೆಎಂ 3ಚಿಕ್ಕಮಗಳೂರು ಹೊರ ವಲಯದ ನಲ್ಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು.