ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಇದೀಗ ಮತ್ತೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ತೀವ್ರಗೊಳ್ಳುತ್ತಿದೆ. ಕಾಡಾನೆ ಕಾಡಿಗಟ್ಟಲು ರಚಿಸಲಾಗಿರುವ ಆನೆ ಕಾರ್ಯಪಡೆಯಲ್ಲಿ (ಇಟಿಎಫ್-ಎಲಿಫೆಂಟ್ ಟಾಸ್ಕ್ ಫೋರ್ಸ್) ಇರುವುದು ಬರೇ 25 ಸಿಬ್ಬಂದಿ, ಆದರೆ ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಮೂರು ಪಟ್ಟು ಇದೆ.
ದಯಾನಂದ ಕಲ್ನಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಇದೀಗ ಮತ್ತೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ತೀವ್ರಗೊಳ್ಳುತ್ತಿದೆ. ಕಾಡಾನೆ ಕಾಡಿಗಟ್ಟಲು ರಚಿಸಲಾಗಿರುವ ಆನೆ ಕಾರ್ಯಪಡೆಯಲ್ಲಿ (ಇಟಿಎಫ್-ಎಲಿಫೆಂಟ್ ಟಾಸ್ಕ್ ಫೋರ್ಸ್) ಇರುವುದು ಬರೇ 25 ಸಿಬ್ಬಂದಿ, ಆದರೆ ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಮೂರು ಪಟ್ಟು ಇದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡುವ ಜೊತೆಗೆ ಮಾನವ-ಕಾಡುಪ್ರಾಣಿ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತೀ ವರ್ಷ ಕಾಡಾನೆ ದಾಳಿಗೆ ಜೀವ ಹಾನಿಯಾಗುತ್ತಿರುವುದು ಮುಂದುವರಿದಿದೆ. ಕಾಡಾನೆಗಳ ನಿಯಂತ್ರಣಕ್ಕೆ, ಅವುಗಳ ಕಾಡಿಗಟ್ಟಲು ರಚನೆಗೊಂಡಿರುವ ಆನೆ ಕಾರ್ಯಪಡೆಯಲ್ಲಿ ಇರುವ ಸಿಬ್ಬಂದಿ ಸಂಖ್ಯೆ ಬಹಳ ಕಡಿಮೆ.ಕಾರ್ಯಪಡೆಯಲ್ಲಿ 25 ಸಿಬ್ಬಂದಿ:
ಸುಳ್ಯ ಕೇಂದ್ರವಾಗಿರಿಸಿ ದ.ಕ. ಜಿಲ್ಲೆಗೆ ಮಂಜೂರಾಗಿ ಕಾರ್ಯಪ್ರವೃತಿಯಲ್ಲಿರುವ ಆನೆ ಕಾರ್ಯಪಡೆ(ಇಟಿಎಫ್)ನಲ್ಲಿ ಪ್ರಸ್ತುತ 25 ಮಂದಿ ಸಿಬ್ಬಂದಿಗಳಿದ್ದಾರೆ. ಕಾರ್ಯಪಡೆಯನ್ನು ಎರಡು ಕಡೆ ಕಾರ್ಯಚರಿಸುತ್ತಿದ್ದು, ಸುಳ್ಯದಲ್ಲಿ 13 ಮಂದಿ ಹಾಗೂ ಉಪ್ಪಿನಂಗಡಿಯಲ್ಲಿ 12 ಮಂದಿ ಸಿಬ್ಬಂದಿಯ ತಂಡ ಕಾರ್ಯಚರಣೆ ನಡೆಸುತ್ತಿದೆ. ಎರಡೂ ಕಡೆಯೂ ಒಂದೊಂದು ಥಾರ್ ಜೀಪು ಒದಗಿಸಲಾಗಿದೆ. ಈ ತಂಡದ ಜೊತೆ ಅರಣ್ಯ ಇಲಾಖೆಯ ಓರ್ವ ಡಿಆರ್‌ಎಫ್, ಇಬ್ಬರು ಫಾರೆಸ್ಟ್ ಸಿಬ್ಬಂದಿ ಇದ್ದಾರೆ.ಕಾರ್ಯಪೆಡೆಗೆ ಬೇಕಿದೆ ಇನ್ನಷ್ಟು ಬಲ:
ಜಿಲ್ಲೆಯಲ್ಲಿ ಸುಮಾರು 80ರಷ್ಟು ಕಾಡಾನೆಗಳು ಓಡಾಟ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಬಹುತೇಕ ಹೆಚ್ಚಿನ ಗ್ರಾಮಗಳು ಕಾಡಾನೆ ಹಾವಳಿಗೊಳಗಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಇಟಿಎಫ್ ತಂಡ ಎರಡು ಕಡೆಯಲ್ಲಿ ಕೇಂದ್ರೀಕರಿಸಿ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳ, ಸಿಬ್ಬಂದಿ ಸಹಯೋಗದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ಹೆಚ್ಚಳಗೊಳ್ಳುತ್ತಿರುವುದುರಿಂದ ಆನೆ ಕಾರ್ಯಪಡೆಗೆ ಇನ್ನಷ್ಟು ಬಲ ನೀಡಬೇಕಾಗಿದ್ದು, ಇನ್ನಷ್ಟು ಹೆಚ್ಚು ಸಿಬ್ಬಂದಿಗಳ ನಿಯೋಜಿಸಿ ಪ್ರತೀ ತಾಲೂಕಿನಲ್ಲಿ ಕಾರ್ಯಾಚರಣೆ ತಂಡ ರಚಿಸಿ, ಆಯಾ ತಾಲೂಕಿನ ಕಾಡಾನೆ ಹಾವಳಿ ಇರುವ ಗ್ರಾಮಕ್ಕೆ ತಕ್ಷಣದ ಕಾರ್ಯಾಚರಣೆಗೆ ಲಭ್ಯರಾಗುವಂತೆ ಕ್ರಮ ವಹಿಸಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.ಕಾಡಾನೆಯಿಂದ ಕೃಷಿ ನಾಶ ಹೆಚ್ಚಳ: ದ.ಕ. ಜಿಲ್ಲೆಯಲ್ಲಿ ಸುಳ್ಯ, ಕಡಬದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡಾನೆಯಿಂದ ಕೃಷಿ ಹಾನಿಯಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 1,700ಕ್ಕೂ ಅಧಿಕ ಕಾಡಾನೆಯಿಂದ ಕೃಷಿ ಹಾನಿ ಪ್ರಕರಣ ನಡೆದಿದೆ. ಈ ನಡುವೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಕೃಷಿ ನಾಶಪಡಿಸುತ್ತಿರುವುದು ಕೃಷಿಕರನ್ನು ಆತಂಕಕ್ಕೆ ದೂಡಿದೆ.
5 ವರ್ಷದಲ್ಲಿ 7 ಸಾವು, ಒಂದೇ ಆನೆ ಸೆರೆ !ದ.ಕ. ಜಿಲ್ಲೆಯಲ್ಲಿ 2022ರ ಡಿಸೆಂಬರ್‌ನಲ್ಲಿ ಕಡಬ ತಾಲೂಕಿನ ಶಿರಾಡಿಯಲ್ಲಿ ಓರ್ವ, 2023ರಲ್ಲಿ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಓರ್ವ ಪುರುಷ ಹಾಗೂ ಓರ್ವ ಯುವತಿ, ಅದೇ ವರ್ಷ ಕಡಬ ತಾಲೂಕಿನ ಐತ್ತೂರಿನಲ್ಲಿ ಓರ್ವ ಪುರುಷ, 2025ರಲ್ಲಿ ಪುತ್ತೂರು ತಾಲೂಕಿನ ಹರ್ತ್ಯಡ್ಕದಲ್ಲಿ ಓರ್ವ ಮಹಿಳೆ, ಅದೇ ವರ್ಷ ಬೆಳ್ತಂಗಡಿ ತಾಲೂಕಿನ ಸೌತಡ್ಕ ಬಳಿ ಓರ್ವ ಪುರುಷ, ಈ ವರ್ಷ 2026ರಲ್ಲಿ (ಆ.1) ಓರ್ವ ಪುರುಷ ಸೇರಿದಂತೆ ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ 7 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
2023ರಲ್ಲಿ ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಸಾವನ್ನಪ್ಪಿದ ವೇಳೆ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಅಂದು ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿ ದಾಳಿ ನಡೆಸಿದ ಒಂದು ಆನೆಯನ್ನು ಅಂದು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕದಲ್ಲಿ ಒಂದು ಬಾರಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದ್ದರೂ ಅದು ಮುಂದುವರಿದಿರಲಿಲ್ಲ. ಉಳಿದಂತೆ ಕಾಡಾನೆ ಕಂಡುಬರುವ ವೇಳೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾತ್ರವೇ ಜಿಲ್ಲೆಯಲ್ಲಿ ಮುಂದುವರಿದಿದೆ. ಹಾಗೂ ಕಾಡಾನೆ ಜನವಸತಿ ಪ್ರದೇಶಕ್ಕೆ ಬಾರದಂತೆ ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುತ್ತಿದೆ.ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹಲವು ವರ್ಷಗಳಿಂದ ಇದೆ. . ಪ್ರಸ್ತುತ ಆನೆ ಕಾರ್ಯಪಡೆಯಲ್ಲಿ 25 ಮಂದಿ ಇದ್ದು, ಇಲ್ಲಿಗೆ ಇನ್ನಷ್ಟು ಸಿಬ್ಬಂದಿ, ಘಟಕ ಬೇಕಾಗಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಥಳೀಯವಾಗಿಯೂ ಸ್ಥಳೀಯರ ತಂಡ ರಚಿಸಿ ಅವರ ಸಹಕಾರ ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.
-ರವಿಶಂಕರ್, ಡಿಸಿಎಫ್ ಮಂಗಳೂರು.