ಗಬ್ಬದ ಹಸುವಿನ ಮೇಲೆ ಕಾಡಾನೆ ದಾಳಿ

| Published : Sep 01 2024, 01:50 AM IST

ಸಾರಾಂಶ

ಗಬ್ಬ ಹಸುವೊಂದರ ಮೇಲೆ ಕಾಡಾನೆ ದಾಳಿ ನಡೆಸಿದೆ. ಕೆದಕಲ್‌ ಗ್ರಾ.ಪಂ. ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಗದ್ದೆಯಲ್ಲಿ ಹುಲ್ಲು ಮೇಯುತ್ತಿದ್ದ ಗಬ್ಬ ಹಸುವೊಂದರ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಹೊರೂರು ಗ್ರಾಮದ ಕಾಫಿ ಬೆಳೆಗಾರರಾದ ದೇವಿ ಪ್ರಸಾದ್ ಕಾಯರ್ ಮಾರ್ ಅವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಹುಲ್ಲು ಮೇಯಲು ಬಿಟ್ಟಿದ್ದರು. ಇದೇ ಸಂದರ್ಭ ದಿಢೀರನೆ ಬಂದ ಕಾಡಾನೆ ಗಬ್ಬ ಹಸುವಿನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.

ಗಾಯಗೊಂಡಿದ್ದ ಹಸುವಿನ ರೋದನ ಶಬ್ದ ಕೇಳಿ ಮಾಲೀಕರು ನೋಡಿದಾಗ ಹಸು ಕಾಡಾನೆ ದಾಳಿಯಿಂದ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡು ಕೆಳಗೆ ಬಿದ್ದು ಒದ್ದಾಡುತ್ತಿರುವುದು ಗೋಚರಿಸಿದೆ.

ತಮ್ಮ ಗದ್ದೆಯ ಬಳಿ ಬಂದ ಕಾಡಾನೆಯ ವಿಚಾರ ತಿಳಿದ ಮಾಲೀಕರು ಮತ್ತು ಅಕ್ಕಪಕ್ಕದವರು ಆತಂಕಗೊಂಡಿದ್ದಾರೆ.

ವಿಚಾರ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಹಸುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.