ಸಾರಾಂಶ
ಆಟೋ ರಿಕ್ಷಾಕ್ಕೆ ಎದುರಾಗಿ ಪ್ಲಾಂಟೇಷನ್ ಕಡೆಗೆ ಸಾಗಿದ ಕಾಡಾನೆ । ಆತಂಕದಲ್ಲಿ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮದ ಶಾಲೆ ಪಕ್ಕದಲ್ಲಿದ್ದ ಅಂಗನವಾಡಿ, ಶೌಚಾಲಯ ಸಮೀಪದ ಮುಖ್ಯ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ 1.30 ಸುಮಾರಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು, ಶಾಲೆಯ ಮಕ್ಕಳನ್ನು ಭಯ ಭೀತರನ್ನಾಗಿಸಿದೆ.
ಗುರುವಾರ ಮಧ್ಯಾಹ್ನ 1.30 ಸುಮಾರಿಗೆ ಗಾಂಧಿ ಗ್ರಾಮದ ಅಂಗನವಾಡಿಯಿಂದ 50 ಅಡಿ ದೂರದ ರಸ್ತೆಗೆ ನೀಲಗಿರಿ ಪ್ಲಾಂಟೇಷನ್ ನಿಂದ ಒಂಟಿ ಸಲಗ ರಸ್ತೆಗೆ ಇಳಿಯುತ್ತಿತ್ತು. ಆ ಸಮಯದಲ್ಲಿ ಶೆಟ್ಟಿಕೊಪ್ಪದ ಮೆಹಬೂಬ್ ಎಂಬುವರ ಆಟೋ ರಿಕ್ಷಾ ಅದೇ ರಸ್ತೆಯಲ್ಲಿ ಬಂದಿದೆ. ಒಂಟಿ ಸಲಗ ಎದುರಾದಾಗ ಗಾಬರಿಯಾದ ಆಟೋ ಚಾಲಕರು ವೇಗವಾಗಿ ಮುಂದೆ ಹೋಗಿ ಆನೆಯಿಂದ ತಪ್ಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಒಂಟಿ ಸಲಗ ಸಹ ಘೀಳಿಡುತ್ತಾ ರಸ್ತೆ ದಾಟಿ ಸಾಗುವಾನಿ ಪ್ಲಾಂಟೇಷನ್ ಗೆ ನುಗ್ಗಿ ಮುಂದಕ್ಕೆ ಹೋಗಿದೆ.ಆಟೋ ರಿಕ್ಷಾ ಗಾಂಧಿ ಗ್ರಾಮದಿಂದ ಮಡಬೂರು ರಸ್ತೆಯ ಕಡೆ ಹೋಗುತ್ತಿದ್ದು ಆಟೋದಲ್ಲಿ ಚಪ್ಪೆನಾಡು ಶ್ರೀಕಂಠ ಎಂಬ ಪ್ರಯಾಣಿಕರು ಸಹ ಇದ್ದರು. ಮಧ್ಯಾಹ್ನದ ಸಮಯದಲ್ಲಿ ಹತ್ತಿರದಲ್ಲೇ ಒಂಟಿ ಸಲಗ ಘೀಳಿಡುವ ಶಬ್ದ ಕೇಳಿ ಗ್ರಾಮಸ್ಥರು, ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.
ಅಲ್ಲದೆ ಗುರುವಾರ ಸಂಜೆ 4.30 ಸುಮಾರಿಗೆ ಸೂಸಲವಾನಿ ಗ್ರಾಮದ ಜೇನುಕಟ್ಟೆ ಸರದಲ್ಲಿ 8 ಕಾಡಾನೆಗಳು ಸಮೀಪದ ಕೆರೆ ನೀರು ಕುಡಿದು ತೋಟಗಳಿಗೆ ಬರುತ್ತಿರುವ ದೃಶ್ಯ ಸ್ಥಳೀಯರು ಕಂಡಿದ್ದಾರೆ.-- ಬಾಕ್ಸ್ ---
ಕಾಡಾನೆ ತಡೆಗೆ ಆಗ್ರಹಹಗಲು ಹೊತ್ತಿನಲ್ಲೇ ಒಂಟಿ ಸಲಗ ಬಂದಿದ್ದು ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಇಬ್ಬರು ಕಾಡಾನೆಯಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಸರ್ಕಾರ ಕಾಡಾನೆ ಬಾರದಂತೆ ದುಬಾರಿ ವೆಚ್ಚದಲ್ಲಿ ರೇಲ್ವೆ ಬ್ಯಾರಿಕೇಡ್ ಮಾಡುವುದಕ್ಕಿಂತ ಸದ್ಯಕ್ಕೆ ಕಡಿಮೆ ವೆಚ್ಚದಲ್ಲಿ ಮುತ್ತಿನಕೊಪ್ಪದ ತುಂಗಾ ತಿರುವ ಯೋಜನೆ ಕಚೇರಿ ಸಮೀಪದಿಂದ ಬಾಳೆಹೊನ್ನೂರಿನವರೆಗೆ ಉತ್ತಮ ಗುಣಮಟ್ಟದ ಟೆಂಟಿಕಲ್ ಪೆನ್ಸಿಂಗ್ ಮಾಡಿ ತಾತ್ಕಾಲಿಕವಾಗಿಯಾದರೂ ಕಾಡಾನೆಗಳು ನಾಡಿಗೆ ಬರದಂತೆ ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.