ಸಾರಾಂಶ
ಯಾವುದೇ ಧರ್ಮದವರಿರಲಿ ಕೇವಲ ಚರಾಸ್ತಿ-ಚಿರಾಸ್ತಿ ಗಳಿಸುವುದಕ್ಕಿಂತ ಉತ್ತಮ ಚಾರಿತ್ಯ ಗಳಿಸಬೇಕು. ಅದರಿಂದ ಭಾವೈಕ್ಯದ ಭಾವನೆಗಳು ಅಧಿಕವಾಗಿ ಎಲ್ಲಿಯೂ ದ್ವಂದ್ವ-ವೈರುಧ್ಯಗಳು ಅಂಕುರಿಸುವುದಿಲ್ಲ.
ಧಾರವಾಡ:
ಜಗತ್ತಿನ ಸಕಲ ಧರ್ಮಗಳ ಗುರಿಯೂ ಸಾಕ್ಷಾತ್ಕಾರ ಸಂಪಾದನೆ. ಹಾಗಾಗಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಭಾವೈಕ್ಯ ಧರ್ಮ ಪಾಲಿಸಿದಾಗ ಮನುಕುಲದ ಉತ್ಕಷ ಸಾಧ್ಯ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವವದ ಅಂಗವಾಗಿ ಹಮ್ಮಿಕೊಂಡಿದ್ದ ‘ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶ’ ಉದ್ಘಾಟಿಸಿದ ಅವರು, ಸತ್ಯ, ಶಾಂತಿ ಹಾಗೂ ಅಹಿಂಸಾ ಧರ್ಮಗಳ ಜತೆಗೆ ಸಹೋದರ ಧರ್ಮವನ್ನೂ ರೂಢಿಸಿಕೊಂಡು ಬದುಕಿದರೆ ಸಮಾಜದಲ್ಲಿ ಒಡಕಿನ ಭಾವನೆಗಳು ಇಣಿಕಿ ಹಾಕುವುದಿಲ್ಲ ಎಂದರು.
ತುಮಕೂರು ಜಿಲ್ಲೆಯ ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಎಲ್ಲರೂ ಕೂಡಿ ಬಾಳುವ ಸ್ನೇಹ ಸಂಕಲ್ಪ ಮಾಡಲು ಕರೆ ನೀಡಿದ್ದ ರಂಭಾಪುರಿ ಪೀಠದ ಜಗದ್ಗುರುಗಳು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ಹೇಳಿರುವ ತಪೋವಾಣಿ ಶಾಶ್ವತವಾಗಿದೆ ಎಂದು ಹೇಳಿದರು.ಉಪ್ಪಿನಬೆಟಗೇರಿ ಮುರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಯಾವುದೇ ಧರ್ಮದವರಿರಲಿ ಕೇವಲ ಚರಾಸ್ತಿ-ಚಿರಾಸ್ತಿ ಗಳಿಸುವುದಕ್ಕಿಂತ ಉತ್ತಮ ಚಾರಿತ್ಯ ಗಳಿಸಬೇಕು. ಅದರಿಂದ ಭಾವೈಕ್ಯದ ಭಾವನೆಗಳು ಅಧಿಕವಾಗಿ ಎಲ್ಲಿಯೂ ದ್ವಂದ್ವ-ವೈರುಧ್ಯಗಳು ಅಂಕುರಿಸುವುದಿಲ್ಲ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಮಾತನಾಡಿದರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಸ್ವಾಮೀಜಿ ಮಾತನಾಡಿದರು. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ನಂತರ ಗುರುರಕ್ಷೆ ನಡೆಯಿತು. ಶಿವಾನಂದ ತಡಕೋಡ ಸ್ವಾಗತಿಸಿದರು. ಶ್ರೇಯಾ ಲುಕ್ ಭರತನಾಟ್ಯ ಪ್ರದರ್ಶಿಸಿದರು. ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.