ಉತ್ತಮ ಆಡಳಿತ ಭವಿಷ್ಯಕ್ಕಾಗಿ ಅರ್ಹರು ಹಕ್ಕು ಚಲಾಯಿಸಿ: ನ್ಯಾಯಾಧೀಶೆ ವರ್ಷಶ್ರೀ

| Published : Jan 26 2025, 01:31 AM IST

ಉತ್ತಮ ಆಡಳಿತ ಭವಿಷ್ಯಕ್ಕಾಗಿ ಅರ್ಹರು ಹಕ್ಕು ಚಲಾಯಿಸಿ: ನ್ಯಾಯಾಧೀಶೆ ವರ್ಷಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ಮೂಲಕ ಉತ್ತಮ ಆಡಳಿತದ ಭವಿಷ್ಯ ಸಾಕಾರಗೊಳಿಸಬಹುದು. ಎಲ್ಲರೂ ಮತದಾನದ ಕರ್ತವ್ಯ ನಿಭಾಯಿಸಬೇಕು.

ಕುಮಟಾ: ಚುನಾವಣಾ ಆಯೋಗದ ಸ್ಥಾಪನಾ ದಿನವನ್ನು ೨೦೧೧ರಿಂದ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯಗಳ ಅರಿವು ಮತ್ತು ಸಕ್ರಿಯ ಮತದಾನದ ಉತ್ತೇಜನಕ್ಕಾಗಿ ಈ ದಿನ ಆಚರಿಸುತ್ತಿದ್ದೇವೆ. ಮತದಾನ ಹಕ್ಕು ಮತ್ತು ಕರ್ತವ್ಯವೂ ಆಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವರ್ಷಶ್ರೀ ತಿಳಿಸಿದರು.ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮತದಾನದ ಮೂಲಕ ಉತ್ತಮ ಆಡಳಿತದ ಭವಿಷ್ಯ ಸಾಕಾರಗೊಳಿಸಬಹುದು. ಎಲ್ಲರೂ ಮತದಾನದ ಕರ್ತವ್ಯ ನಿಭಾಯಿಸಬೇಕು. ಮತದಾನ ಮಾಡುವುದರಿಂದ ಸಾಮಾನ್ಯ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ನಾವು ಚಲಾಯಿಸಿದ ಮತ ದೇಶವನ್ನು ಉನ್ನತ ಹಂತಕ್ಕೆ ಒಯ್ಯಬಹುದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕು ಎಂದರು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಮಾತನಾಡಿ, ಪ್ರಜಾಪ್ರಭುತ್ವದ ದೇಶದ ಅಭಿವೃದ್ಧಿಯಲ್ಲಿ ಎಲ್ಲ ಮತದಾರರ ಕೊಡುಗೆ ಮಹತ್ವದ್ದಾಗಿದೆ. ಮತದಾನದ ಮೂಲಕ ಆಯ್ಕೆಯಾದ ಜನಪ್ರತಿನಿಧಿ ಮತದಾರರ ಧ್ವನಿಯಾಗಿರುತ್ತಾರೆ. ಉತ್ತಮ ಜವಾಬ್ದಾರಿಯುತ ಜನಪ್ರತಿನಿಧಿಯನ್ನು ಆಯ್ಕೆಯ ಹೊಣೆ ಮತದಾರನ ಮೇಲಿದೆ.

ಆದ್ದರಿಂದ ಜನಪ್ರತಿನಿಧಿಯಾಗಬೇಕಾದವರ ವೈಶಿಷ್ಟ್ಯ ಗುರುತಿಸಬೇಕೇ ಹೊರತು ಆಸೆ, ಅಮಿಷಗಳಿಗೆ ಮತ ಮಾರಿಕೊಳ್ಳುವುದಲ್ಲ. ಉತ್ತಮ ಆಯ್ಕೆಯಿಂದ ಮಾತ್ರ ದೇಶ ಉದ್ಧಾರ ಸಾಧ್ಯ. ಆದ್ದರಿಂದ ಮತದಾನದ ಅವಕಾಶವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು. ತಾಪಂ ಇಒ ಮತ್ತು ಸ್ವೀಪ್ ಸಮಿತಿ ಅಧಿಕಾರಿ ರಾಜೇಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತದಾರನ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುತ್ತದೆ. ಹೀಗಾಗಿ ಪ್ರತಿಯೊಂದು ಮತ ಕೂಡಾ ಮುಖ್ಯ. ಯುವ ಮತದಾರರು ಪಾಲ್ಗೊಳ್ಳುವಿಕೆ ಹೆಚ್ಚಬೇಕೆಂಬ ಉದ್ದೇಶ ಈ ಕಾರ್ಯಕ್ರಮದಲ್ಲಡಗಿದೆ. ಆಮಿಷಗಳ ಮತದಾನ ದೂರವಾಗಬೇಕು. ಎಲ್ಲರೂ ಮತದಾನದ ಮಹತ್ವ ಅರಿಯಬೇಕು ಎಂದರು. ಮತದಾರ ದಿನಾಚರಣೆ ಕುರಿತು ದಯಾನಂದ ಶೇಟ ಉಪನ್ಯಾಸ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಶ್ರೀಧರ ಶಾನಭಾಗ ಉಪಸ್ಥಿತರಿದ್ದರು. ತಹಸೀಲ್ದಾರ್ ಸತೀಶ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮತದಾನದ ದಿನಾಚರಣೆ ಪ್ರಯುಕ್ತ ನಡೆಸಲಾದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಕಾರ್ಯನಿರ್ವಹಣೆಗಾಗಿ ಮೂವರು ಬಿಎಲ್‌ಒಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸುಬ್ರಾಯ ಎನ್. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಜಿ.ಡಿ. ಭಟ್ ವಂದಿಸಿದರು. ವಸಂತ ಸಾಮಂತ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.