ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅರ್ಹ ಕಾರ್ಮಿಕರು ಪಡೆದುಕೊಂಡು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ತಿಳಿಸಿದರು.ತಾಲೂಕು ಆಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕ ಕಟ್ಟಡ ಮಂಡಳಿ ಇವರ ಸಹಯೋಗದಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಬುಧವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ಮಾಡಿಸಿಕೊಂಡು ಇದನ್ನು ಮತ್ತೆ ನವೀಕರಿಸಿಕೊಳ್ಳಬೇಕು, ಗುತ್ತಿಗೆದಾರರು ಹಾಗೂ ಕಾರ್ಮಿಕರು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ, ಆರೋಗ್ಯ ಸೇವೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಸವಿತಾ ಮಾತನಾಡಿ, ಅಸಂಘಟಿತ ಕಾರ್ಮಿಕರ ನೋಂದಣಿ, ಸ್ಮಾರ್ಟ್ ವಿತರಣೆ ಯೋಜನೆಯಡಿಯಲ್ಲಿ ೨೦ ಅಸಂಘಟಿತ ವರ್ಗಗಳಿಗೆ ಉಚಿತ ನೋಂದಣಿ ಇದ್ದು ಸ್ಮಾರ್ಟ್ ಕಾರ್ಡನ್ನು ನೀಡಲಾಗುತ್ತದೆ. ನಮ್ಮ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿಗೆ ಅಪಘಾತ ಪರಿಹಾರ ಸೌಲಭ್ಯ, ಸಹಜ ಮರಣ ಮತ್ತು ಅಂತ್ಯಕ್ರಿಯೆ ವೆಚ್ಚ ಸೇರಿದಂತೆ ಅನೇಕ ಯೋಜನೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.ಕಾಟಾಚಾರಕ್ಕೆ ನಡೆದ ಕಾರ್ಯಕ್ರಮ:ಈ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಇದ್ದರು. ಈ ಸಭಾಂಗಣ ಶಿಥಿಲವಾಗಿದ್ದು ಇಲ್ಲಿ ಮಳೆ ನೀರು ಸೋರುತ್ತಿದ್ದರೂ ಇಲ್ಲೇ ಕಾರ್ಯಕ್ರಮ ನಡೆಯಿತು. ವರ್ತಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹೊರತುಪಡಿಸಿ ಇತರರು ಇರಲೇ ಇಲ್ಲ. ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ನೋಂದಣಿಯಾಗಿದ್ದರೂ ೭೦ ರಿಂದ ೮೦ ಮಂದಿ ಮಾತ್ರ ಭಾಗವಹಿಸಿದ್ದರು. ಅವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿಯೇ ಇರಲಿಲ್ಲ. ಪತ್ರಿಕಾ ಪ್ರಕಟಣೆಯಲ್ಲೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಒಂದು ದಿನದ ಕಾರ್ಯಾಗಾರದಲ್ಲಿ ಕಾರ್ಯಕ್ರಮ ಉದ್ಘಾಟನೆ ನಂತರ ಮಾಹಿತಿ ಮಾತ್ರ ನೀಡಲಾಯಿತು. ಅರ್ಧ ದಿನದಲ್ಲೇ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಮುಂದೆ ಇಂತಹ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು ಎಂದು ನಾಗ, ಮಹೇಶ, ಪ್ರಕಾಶ, ರಾಜು ಸೇರಿದಂತೆ ಹಲವರು ದೂರಿದರು. ತಹಸೀಲ್ದಾರ್ ಜಯಪ್ರಕಾಶ್ ಕಾರ್ಮಿಕ ನಿರೀಕ್ಷಕ ವಿ.ಎಲ್. ಪ್ರಕಾಶ್, ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ್, ಎಂ. ಮಹೇಶ್, ತಾಪಂ ನರೇಗಾ ಸಹಾಯಕ ನಿರ್ದೇಶಕಿ ರಾಧಾ ಸೇರಿದಂತೆ ಅನೇಕರು ಇದ್ದರು.