ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳಿಗೆ ಯುವಕರು ವ್ಯಸನಿಗಳಾಗಿ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಯುವಕರು ಇಂತಹ ದುಶ್ಚಟಗಳಿಂದ ದೂರ ಇದ್ದು ಎಚ್‌ಐವಿಯಂತಹ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಮಾಜದಲ್ಲಿ ಎಚ್‌ಐವಿ ಬಾಧಿತರಿಗೆ ಆಗುತ್ತಿರುವ ತಾರತಮ್ಯ ನಿವಾರಣೆ ಹಾಗೂ ಅವರ ಹಕ್ಕು ಬಾಧ್ಯತೆಯನ್ನು ರಕ್ಷಣೆ ಮಾಡುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್ ಗೌಡ ಕರೆ ನೀಡಿದರು.

ಪಟ್ಟಣದ ಪರಿವರ್ತನಾ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳಿಗೆ ಯುವಕರು ವ್ಯಸನಿಗಳಾಗಿ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಯುವಕರು ಇಂತಹ ದುಶ್ಚಟಗಳಿಂದ ದೂರ ಇದ್ದು ಎಚ್‌ಐವಿಯಂತಹ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್ ಮಾತನಾಡಿ, ಎಚ್‌ಐವಿ ಸೋಂಕಿನ ಹಂತ, ಹರಡುವ ವಿಧಾನ, ಮುನ್ನೆಚ್ಚರಿಕೆ ಕ್ರಮಗಳು, ತಡೆಗಟ್ಟುವ ವಿಧಾನ ಹಾಗೂ ಮುಂದುವರೆದ ಚಿಕಿತ್ಸೆ ಹಾಗೂ ಸಂಶೋಧನೆ ಬಗ್ಗೆ ಮಾಹಿತಿ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮಿ ಮಾತನಾಡಿ, ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಆಪ್ತ ಸಮಾಲೋಚಿಕಿ ಮಿಲನ ಮಾತನಾಡಿದರು.

ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಂ.ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ಮರಿಗೌಡ, ಕಾರ್ಯದರ್ಶಿ ಸಿ.ಆರ್.ದಿನೇಶ್, ಪ್ರಾಂಶುಪಾಲರಾದ ಚೆನ್ನಕೇಶವ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜು, ಜಿ.ಬಿ. ಹೇಮಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ, ಎಸ್.ಪಿ. ಪಣಿಂದ್ರ, ಮೇಘನಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.