ಸಾರಾಂಶ
ಕನಕಗಿರಿ:
ಭಾರತವು ಕಳೆದ ೭೮ ವರ್ಷಗಳಲ್ಲಿ ಬಾಹ್ಯಾಕಾಶ ಪರಿಶೋಧನೆ, ತಂತ್ರಜ್ಞಾನ, ಮೂಲ ಸೌಕರ್ಯ ಮತ್ತು ಕ್ರೀಡೆಗಳಲ್ಲಿ ಬಹಳಷ್ಟು ಸಾಧನೆ ಮಾಡಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕು ೭೯ ವರ್ಷ ಗತಿಸಿದರೂ ಭ್ರಷ್ಟಾಚಾರ, ಹಿಂಸೆ, ನಿರುದ್ಯೋಗ, ಬಡತನ, ಅನಕ್ಷರತೆ, ಭಯೋತ್ಪಾದನೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುತ್ತಿದ್ದೇವೆ. ಸ್ವಾತಂತ್ರ‍್ಯ ಹೋರಾಟಗಾರರು ಕಂಡಂತೆ ನಾವೆಲ್ಲರೂ ಜೀವಿಸುವ ಮೂಲಕ ಈ ಪಿಡುಗು ತೊಲಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದರು.ಅಹಿಂಸೆಯ ಆದಿ ಹಿಡಿದು ಮಹಾತ್ಮ ಗಾಂಧೀಜಿ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ ನೀಡಿದರು. ನೇತಾಜಿ ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲಾ ಲಜಪತರಾಯ್ ಸೇರಿ ಅಸಂಖ್ಯಾತ ಹೋರಾಟಗಾರರ ಶ್ರಮ, ಪ್ರಾಣತ್ಯಾಗದಿಂದ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಯಶಸ್ವಿಯಾಗಿದ್ದಾರೆ ಎಂದರು.ಶಾಲಾ ವಿದ್ಯಾರ್ಥಿಗಳಿಂದ ಧ್ವಜವಂದನೆ ಹಾಗೂ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಅನಿಲಕುಮಾರ ಬಿಜ್ಜಳ, ರಾಜಾಸಾಬ ನಂದಾಪುರ, ಸುರೇಶ ಗುಗ್ಗಳಶೆಟ್ರ, ಶೇಷಪ್ಪ ಪೂಜಾರ, ಶರಣೇಗೌಡ, ರಾಕೇಶ ಕಂಪ್ಲಿ, ಹನುಮಂತ ಬಸರಿಗಿಡ, ನಂದಿನಿ ರಾಮಾಂಜನೇಯರೆಡ್ಡಿ, ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ಗ್ರೇಡ್-೨ ತಹಸೀಲ್ದಾರ್ ವಿ.ಎಚ್. ಹೊರಪೇಟಿ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ತಾಲೂಕು ಖಜಾನೆ ಅಧಿಕಾರಿ ದುರ್ಗಾಸಿಂಗ್, ಪಿಐ ಎಂ.ಡಿ ಫೈಜುಲ್ಲಾ, ಸಿಆರ್‌ಪಿ ರಾಜೀವ್ ಇತರರಿದ್ದರು. ಶಿಕ್ಷಕಿ ದೀಪಾ ಗಡಗಿ ನಿರೂಪಿಸಿದರೆ, ಶಿಕ್ಷಕರಾದ ಮೌನೇಶ ಬಡಿಗೇರ ಹಾಗು ಶಾಮೀದಸಾಬ ಸ್ವಾಗತಿಸಿ, ವಂದಿಸಿದರು.ಶಿಷ್ಟಾಚಾರ ಉಲ್ಲಂಘನೆ
ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವ ನಿಮಿತ್ತ ಸಾರ್ವಜನಿಕ ಸಮಾರಂಭದಲ್ಲಿ ಪಪಂ ಸದಸ್ಯೆಯರ ಪತಿಯರು ವೇದಿಕೆ ಹಂಚಿಕೊಂಡು ಶಿಷ್ಟಾಚಾರ ಉಲ್ಲಂಘಿಸಿದರು. ಅಲ್ಲದೇ ಪಪಂ ಅಧ್ಯಕ್ಷೆ, ಉಪಾಧ್ಯಕ್ಷರ ಹಾದಿಯಾಗಿ ಬಹುತೇಕ ಸದಸ್ಯರು ಧ್ವಜಾರೋಹಣ ನಂತರ ವೇದಿಕೆಗೆ ಬಂದಿದ್ದಕ್ಕೆ ಸಾರ್ವಜನಿಕರ ಬೇಸರ ವ್ಯಕ್ತಪಡಿಸಿದರು. ಶಿಷ್ಟಾಚಾರ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.