ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ-2026 ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ-2026 ಕಾರ್ಯಕ್ರಮ ನಡೆಯಿತು.
ಗೃಹ ವಿಜ್ಞಾನ ಪ್ರಾಧ್ಯಾಪಕರಾದ ಡಾ. ಗೋಪಿಕಾ ಸಿ. ಮುತ್ತಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮದ ಹಿನ್ನಲೆ ಹಾಗೂ ಅದರ ಮುಖ್ಯ ಉದ್ದೇಶಗಳನ್ನು ತಿಳಿಸಿದರು. ಸರಿಯಾದ ಪೋಷಣೆಗೆ ಒತ್ತು ನೀಡುವ ಮೂಲಕ ದೈನಂದಿನ ಜೀವನದಲ್ಲಿ ಜನರು ತೆಗೆದುಕೊಳ್ಳುವ ಆಹಾರದ ಆಯ್ಕೆಗಳು ಹೇಗೆ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ಹಾಗೂ ಹೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.ಶಾಲಾ ಮಕ್ಕಳು ತಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಕ್ಕೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಿದ ಅವರು, ಅಪೌಷ್ಠಿಕತೆ ಮತ್ತು ಕಳಪೆ ಆಹಾರ ಪದ್ಧತಿಗಳ ಅಪಾಯಗಳನ್ನು ವಿವರಿಸಿದರು.
ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಗೋಪಾಲ್, ಕೃಷಿ ವಿಜ್ಞಾನ ಕೇಂದ್ರದ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿ, ಮಕ್ಕಳಲ್ಲಿ ವೈಯುಕ್ತಿಕ ಸ್ವಚ್ಛತೆಯ ಮಹತ್ವ, ಮಾನಸಿಕ ಆರೋಗ್ಯ ಹಾಗೂ ಶಾಲಾ ಆವರಣವನ್ನು ಶುಚಿತ್ವವನ್ನು ಕಾಪಾಡಿ ಕೊಳ್ಳುವುದರ ಬಗ್ಗೆ ತಿಳಿಸಿದರು.ಕೇಂದ್ರದ ಪ್ರಾಧ್ಯಾಪಕ ಡಾ. ಡಿ. ಬಾಲಾಜಿ ನಾಯ್ಕ ಮಾತನಾಡಿ, ಆಹಾರ ಉತ್ಪಾದನೆಯಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಮಣ್ಣಿನ ಫಲವತ್ತತೆ ಮತ್ತು ದೊರೆಯುವ ಪೋಷಕಾಂಶಗಳ ಮೇಲೆ ಅವಲಂಭಿತವಾಗಿರುವ ಕಾರಣ ಮಣ್ಣಿಗೆ ಹೆಚ್ಚಿನ ಸಾವಯವ ಗೊಬ್ಬರಗಳು, ಜೈವಿಕ ಗೊಬ್ಬರಗಳು ಮತ್ತು ಹಸಿರೆಲೆ ಗೊಬ್ಬರಗಳು ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯೊಂದಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ ಸ್ವಾಭಾವಿಕವಾಗಿ ಉತ್ಪಾದನೆಯಾದ ಆಹಾರವು ಪೋಷಕಾಂಶ ಭರಿತವಾಗಿರುತ್ತದೆಯೆಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ, ಶಿಕ್ಷಕರಾದ ನರಸಿಂಹಮೂರ್ತಿ, ಕಾಂತರಾಜು ಮತ್ತಿತರರು ಭಾಗವಹಿಸಿದ್ದರು.ಫೋಟೋ-
23ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆ ಮಾಚೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ ಕಾರ್ಯಕ್ರಮ ನಡೆಯಿತು.