ಶಿಕ್ಷಣದಿಂದಲೇ ಮಹಿಳೆಯರಿಗೆ ಮುಕ್ತಿ: ಮಂಜುಳಾ ಮಜ್ಜಿಗಿ

| Published : Jan 04 2025, 12:31 AM IST

ಶಿಕ್ಷಣದಿಂದಲೇ ಮಹಿಳೆಯರಿಗೆ ಮುಕ್ತಿ: ಮಂಜುಳಾ ಮಜ್ಜಿಗಿ
Share this Article
  • FB
  • TW
  • Linkdin
  • Email

ಸಾರಾಂಶ

ಎಐಎಂಎಸ್ಎಸ್ ವತಿಯಿಂದ ಕೊಪ್ಪಳ ಬಳಿ ನರೇಗಾ ಕಾಮಗಾರಿ ಸ್ಥಳದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ದಿನಾಚರಣೆ ಜರುಗಿತು.

ಕೊಪ್ಪಳ: ಎಐಎಂಎಸ್ಎಸ್ ವತಿಯಿಂದ ಕೊಪ್ಪಳ ಬಳಿ ನರೇಗಾ ಕಾಮಗಾರಿ ಸ್ಥಳದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮ ದಿನಾಚರಣೆ ಜರುಗಿತು.

ಎಐಎಂಎಸ್ಎಸ್ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗಿ ಮಾತನಾಡಿ, ಅಂದಿನ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಕಟ್ಟಿದವರು. ಶಿಕ್ಷಣದಿಂದಲೇ ಮಹಿಳೆಯರಿಗೆ ಮುಕ್ತಿ ಸಿಗುವುದು ಎಂದು ನಂಬಿದ್ದವರು. ಅವರು ಮಹಿಳಾ ಶಿಕ್ಷಣಕ್ಕಾಗಿ, ವಿಧವಾ ಪುನರ್ ವಿವಾಹಕ್ಕಾಗಿ ಧ್ವನಿ ಎತ್ತಿದ್ದರು. ಬಾಲ್ಯ ವಿವಾಹ, ವರದಕ್ಷಿಣೆ, ಜಾತಿ ತಾರತಮ್ಯ, ಮೌಢ್ಯದ ವಿರುದ್ಧ ಹೋರಾಟ ಕಟ್ಟಿದ ಧೀರೆ. ಬಾಲಕಿಯರಿಗೆ ವಿದ್ಯೆ ಹೇಳಿಕೊಡಲು ಶಾಲೆಗೆ ಹೆಜ್ಜೆ ಇಡುತ್ತಿರುವಾಗ ಸುತ್ತಲಿನವರ ಅವಾಚ್ಯ ಬೈಗುಳ, ದಾರಿಯಲ್ಲಿ ಹೋಗುತ್ತಿದ್ದರೆ ಹಲ್ಲೆ ಮಾಡುವ ಪ್ರಯತ್ನ, ಸಗಣಿ ಎರಚಲು ಪುರುಷರು ಕಾದು ನಿಲ್ಲುತ್ತಿದ್ದರು. ಆದರೂ ಆಕೆ ಹಾಗೆಯೇ ಮುನ್ನಡೆದು ಶಾಲೆಗೆ ಹೋಗಿ ಶಿಕ್ಷಣ ನೀಡುವುದನ್ನು ನಿಲ್ಲಿಸಲಿಲ್ಲ. ತಾನು ನಂಬಿದ ಸತ್ಯಕ್ಕಾಗಿ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ. ಬದಲಿಗೆ ಇನ್ನೂ ಹೆಚ್ಚು ದೃಢವಾಗುತ್ತ ಹೋಯಿತು. ಮಹಿಳೆಯರು ಧೈರ್ಯವಾಗಿ ಮುನ್ನಡೆಯಬೇಕು, ಘನತೆಯಿಂದ ಗೌರವಯುತವಾಗಿ ಸಹ ಬಾಳ್ವೆಯಿಂದ ಬಾಳಬೇಕು ಎಂಬುದು ಸಾವಿತ್ರಿಬಾಯಿ ಫುಲೆ ಅವರ ಕನಸಾಗಿತ್ತು ಎಂದು ಹೇಳಿದರು.ಜಿಲ್ಲಾ ಸಂಘಟನಾಕಾರರಾದ ಶಾರದಾ ಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಕೊಲೆ, ಮರ್ಯಾದೆಗೇಡು ಹತ್ಯೆಗಳು, ಆಸಿಡ್ ದಾಳಿ, ಗುಂಪು ಅತ್ಯಾಚಾರ..ಹೀಗೆ ಹಲವು ಬಗೆಯ ಅಗೌರವ, ಅನಾಧರಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಸಾಂಸ್ಕೃತಿಕ ಅಧಃಪತನದಿಂದಾಗಿ ಸಮಾಜದಲ್ಲಿ ನೀತಿ-ನೈತಿಕತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದರು.

ಪ್ರಮುಖರಾದ ಹುಸೇನ್‌ಬಿ, ರಾಜೇಶ್ವರಿ, ಪಾರ್ವತಿ, ಗಂಗಮ್ಮ, ದೇವಿಕಾ ಸೇರಿದಂತೆ ಮತ್ತಿತರರಿದ್ದರು.