ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ದಸರಾ ಚಲನಚಿತ್ರೋತ್ಸಕ್ಕೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಇಂದು ಚಾಲನೆ ನೀಡಿದರು.ನಗರದ ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಸರಾ ಚಲನಚಿತ್ರೋತ್ಸವದ ಜ್ಯೋತಿ ಬೆಳಗುವ ಮೂಲಕ ಸಂಸದರು ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರಗಳನ್ನು ಮನರಂಜನೆಗಾಗಿ ಅಲ್ಲದೇ ದಿನನಿತ್ಯದ ಒತ್ತಡಗಳನ್ನು ನಿಭಾಯಿಸಲು ನೋಡಬೇಕು. ಸಾಮಾಜಿಕ ಹಾಗೂ ಪೌರಾಣಿಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಉತ್ತಮ ಸಂದೇಶಗಳನ್ನು ಹೊಂದಿರುವ ಚಿತ್ರಗಳನ್ನು ಜನರು ಹೆಚ್ಚಾಗಿ ವೀಕ್ಷಿಸಬೇಕು. ಈ ಮೂಲಕ ಸಿನಿಮಾಗಳಲ್ಲಿನ ಸಕಾರಾತ್ಮಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರವನ್ನು ಉದಾಹರಿಸಿದ ಸುನೀಲ್ ಬೋಸ್ ಅವರು ಹಿಂದಿನ ಚಲನಚಿತ್ರ ನಟರು ಚಿತ್ರಗಳಲ್ಲಿ ಬಹಳ ಶ್ರದ್ಧೆ, ಭಕ್ತಿಯಿಂದ ನಟನೆಯಲ್ಲಿ ತೊಡಗುತ್ತಿದ್ದರು. ಈಗಿನ ಚಿತ್ರಗಳಲ್ಲಿ ಅವು ಇಲ್ಲವಾಗಿದ್ದು, ಚಲನಚಿತ್ರಗಳು ವ್ಯಾಪಾರೀಕರಣ ಹಾಗೂ ವೈಭವೀಕರಣದಿಂದ ಕೂಡಿವೆ. ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ’ಅನ್ನ’ ಚಿತ್ರವು ಅನ್ನದ ಮಹತ್ವವನ್ನು ಸಾರುತ್ತಿದೆ. ಸಿಎಂ ಸೇರಿದಂತೆ ಅನೇಕ ಗಣ್ಯರು ಸಹ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮೂರು ದಿನಗಳ ದಸರಾ ಚಲನಚಿತ್ರೋತ್ಸಕ್ಕೆ ಚಾಲನೆ ದೊರೆತಿದೆ. ಪಟ್ಟಣದ ೫ ಚಿತ್ರಮಂದಿರದಲ್ಲಿಯೂ ಪ್ರತಿದಿನ ಬೆಳಿಗ್ಗೆ ೧೦ ಹಾಗೂ ಸಂಜೆ ೪ ಗಂಟೆಗೆ ಚಲನಚಿತ್ರಗಳ ಪ್ರದರ್ಶನವಿದೆ. ಚಿತ್ರಮಂದಿರದ ಮಾಲೀಕರು ಯಾವುದೇ ಖರ್ಚಿಲ್ಲದೇ ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ದಸರಾ ಚಲನಚಿತ್ರೋತ್ಸವಕ್ಕೆ ಕೈಜೋಡಿಸಿದ್ದಾರೆ. ಪ್ರದರ್ಶನ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಚಿತ್ರ ವೀಕ್ಷಣೆ ಮಾಡಿ ಚಲನಚಿತ್ರೋತ್ಸವ ಯಶಸ್ವಿಗೊಳಿಸಬೇಕು ಎಂದರು.ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದ ಮಾಲೀಕ ಜಯಸಿಂಹ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಚ್ಚು ಜನರು ಸಿನಿಮಾಗಳನ್ನು ವೀಕ್ಷಿಸುತ್ತಿಲ್ಲ, ಚಿತ್ರೋದ್ಯಮಕ್ಕೆ ಇದು ಅಪಾಯಕಾರಿ ಅಂಶವಾಗಿದೆ. ಜನರು ಚಿತ್ರಮಂದಿರದತ್ತ ಬರಬೇಕು ಅಂದರೆ ಉತ್ತಮ ಕಥಾವಸ್ತು ಹಂದರವುಳ್ಳ ಚಲನಚಿತ್ರಗಳು ತೆರೆಗೆ ಬರಬೇಕಾಗಿದೆ. ಚಲನಚಿತ್ರ ರಂಗದ ಪುನಶ್ಚೇತನಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅನ್ನ ಚಲನಚಿತ್ರದ ನಿರ್ದೇಶಕ ಇಸ್ಲಾಹುದ್ದೀನ್ ಹಾಗೂ ಗೀತರಚನೆಕಾರ ನಾಗೇಶ್ ಕಂದೇಗಾಲ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತ, ಎಡಿಸಿ ಗೀತಾ ಹುಡೇದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ಚಲನಚಿತ್ರ ನಿರ್ದೇಶಕ ಸ್ವಾಮಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.