ಸನಾತನ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

| Published : Mar 29 2024, 12:52 AM IST

ಸನಾತನ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಶ್ಚಾತ್ಯರು ನಮ್ಮ ಯೋಗ, ಧ್ಯಾನ, ಪ್ರಾಣಾಯಾಮವನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಮನೆಯ ರುದ್ರಾಕ್ಷ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಮದ್ರಾಕ್ಷಾಸ ಸಂಸ್ಕೃತಿ ಅಳವಡಿಸಿಕೊಳ್ಳಲು ಇಂದಿನ ಭಾರತೀಯ ಯುವಕರು ಮುಗಿಬೀಳುವುದು ತರವಲ್ಲ .

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಈ ನೆಲದ ಸನಾತನ ಧಾರ್ಮಿಕ ಸಂಸ್ಕೃತಿಯನ್ನು ದೈನಂದಿನ ಬದುಕಿಗೆ ದೈವಿಕ ಶಕ್ತಿಯಾಗಿ ರೂಪಿಸಿಕೊಳ್ಳಲು ಯುವಕರು ಮುಂದಾಗಬೇಕು ಎಂದು ಬೇಬಿಬೆಟ್ಟದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಲೋಕಾರ್ಪಣೆಗೊಂಡ ಬಸವೇಶ್ವರ ಹಾಗೂ ಲಕ್ಷ್ಮೀದೇವಿ ದೇಗುಲ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಪೂರ್ವಿಕರು, ಋಷಿಮನಿಗಳು ಬಿಟ್ಟುಹೋಗಿರುವ ಸನಾತನ ಸಂಸ್ಕೃತಿ ವಿಶ್ವಕ್ಕೆ ಸನ್ಮಾರ್ಗ ತೋರಿಸುವ ಮಾರ್ಗವಾಗಿದೆ ಎಂದರು.

ಪಾಶ್ಚಾತ್ಯರು ನಮ್ಮ ಯೋಗ, ಧ್ಯಾನ, ಪ್ರಾಣಾಯಾಮವನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಮನೆಯ ರುದ್ರಾಕ್ಷ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಮದ್ರಾಕ್ಷಾಸ ಸಂಸ್ಕೃತಿ ಅಳವಡಿಸಿಕೊಳ್ಳಲು ಇಂದಿನ ಭಾರತೀಯ ಯುವಕರು ಮುಗಿಬೀಳುವುದು ತರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಗುಲದಲ್ಲಿ ಸಕಾರಾತ್ಮಕ ಸಾಮರಸ್ಯ ಬಿಂಬಿಸುವ ಶಕ್ತಿ ಇದೆ. ನೈತಿಕತೆ ಕುಸಿಯದಂತೆ ಶಾಂತಿ, ನೆಮ್ಮದಿಯ ತಾಣವನ್ನು ಕಟ್ಟಲು ಶ್ರೀಗಳು, ಮಠ ಮಾನ್ಯಗಳ ಪಾತ್ರ ದೊಡ್ಡದಾಗಿದೆ. ಇದನ್ನು ಪಾಲಿಸಲು ಗುರು - ಹಿರಿಯರು ಮುಂದಾಗಬೇಕಿದೆ. ಎಳೆಯ, ಯುವ ಮನಸ್ಸಿನಲ್ಲಿ ವೈಚಾರಿಕತೆಯ ಧಾರ್ಮಿಕ ಚಿಂತನೆ ಮೂಡಿಸಬೇಕಿದೆ ಎಂದು ನುಡಿದರು.

ಬಾಳೆಹೊನ್ನೂರು ಶಾಖಾ ಮಠ ತೆಂಡೆಕೆರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಜಾಗೃತಿ ಜೊತೆಗೆ ಪ್ರಜಾಪ್ರಭುತ್ವದ ಪಾವಿತ್ರ್ಯತೆ ಕಾಪಾಡಬೇಕು. ಮತದಾನದ ಹಕ್ಕನ್ನು ಕಳೆದುಕೊಳ್ಳದೇ ಸುಭದ್ರ ದೇಶ ಕಟ್ಟಲು ತಮ್ಮ ಹಕ್ಕು ಚಲಾಯಿಸಿ ಎಂದು ಕರೆ ನೀಡಿದರು.

ಮಾನವನ ಅಂತರಂಗ, ಬಹಿರಂಗ ಶುದ್ಧಿಗೊಳಿಸಲು ಭಗವಂತನ ಆರಾಧನೆ ಮುಖ್ಯ. ಭಗವಂತನಿಗೆ ಬೇಕಿರುವುದು ಆಡಂಬರದ ಪೂಜೆಯಲ್ಲ. ಹಳ್ಳಿಯ ಜನರಲ್ಲಿ ಭಗವಂತನ ಮೇಲೆ ನಿರ್ಮಲ ಭಕ್ತಿಯಿದೆ .ಕಷ್ಟ, ಸುಖ ಎರಡರಲ್ಲೂ ದೈವವನ್ನು ನೆನೆಯುವ ಮುಗ್ಧ ಜನತೆ ಇವರಾಗಿದ್ದಾರೆ. ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ, ಪೂರ್ವಜರು ಹಾಕಿಕೊಟ್ಟಿರುವ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಯೋಗ, ಧ್ಯಾನದಲ್ಲಿ ಆಸಕ್ತಿ ತೋರಬೇಕಿದೆ ಎಂದು ತಿಳಿ ಹೇಳಿದರು.

ಪೂರ್ಣಕುಂಭ ಕಳಶ ಮೆರವಣಿಗೆಯೊಂದಿಗೆ ಮಹಿಳೆಯರು ಮಂಗಳವಾದ್ಯದೊಂದಿಗೆ ದೇಗುಲಕ್ಕೆ ಸಾಗಿದರು. ಶ್ರೀ ಸ್ವಾಮಿಗೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆದವು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನಪ್ರಸಾದ ನಡೆಯಿತು.

ಸಮಾರಂಭದಲ್ಲಿ ಶಾಸಕ ಎಚ್.ಟಿ.ಮಂಜು, ಕಾಪನಹಳ್ಳಿ ಗವಿಮಠದ ಸ್ವತಂತ್ರ ಚನ್ನವೀರ ಸ್ವಾಮೀಜಿ, ಬೇಬಿಮಠ ರಾಮೇಶ್ವರಯೋಗಿ ಮಠದ ಬಸವ ಸ್ವಾಮೀಜಿ, ಆರ್‌ಟಿಒ ಮಲ್ಲಿಕಾರ್ಜುನ, ಕೆಪಿಸಿಸಿ ಸದಸ್ಯ ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಧನಂಜಯಕುಮಾರ್, ಮುಖಂಡರಾದ ದಿಂಕಾ ಮಹೇಶ್, ಈರಪ್ಪ, ಚಂದ್ರೇಗೌಡ, ಹರಳುಕುಪ್ಪೆ ಪ್ರತಾಪ್, ಲಿಂಗಾಪುರ ಗ್ರಾಮಸ್ಥರು, ಬಸವೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.