ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸದೃಢ ಭಾರತಕ್ಕಾಗಿ ನಾವೆಲ್ಲರೂ ಒಂದು ಎನ್ನುವ ಸಾಮಾಜಿಕ ಸದ್ಭಾವನೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರಿನ ಧರ್ಮ ಜಾಗರಣಾ ಪ್ರಾಂತ ಸಂಯೋಜಕ ರಾಘವೇಂದ್ರ ಹೇಳಿದರು.

ತಾಲೂಕು ಸಾಮಾಜಿಕ ಸದ್ಭಾವನಾ ಸಮಿತಿಯಿಂದ ಪಟ್ಟಣದ ರಾಮದಾಸ್ ಹೋಟೆಲ್‌ನ ಸುಲೋಚನಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಸದ್ಭಾವನಾ ಕಾರ್ಯಕ್ರಮದಲ್ಲಿ ಕುಟುಂಬ ಜೀವನದ ಮೌಲ್ಯಗಳು ಮತ್ತು ಸಾಮಾಜಿಕ ಸಮರಸತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಾರತ ವಿವಿಧತೆಯಲ್ಲಿ ಐಕ್ಯತೆಯನ್ನು ಸಾಧಿಸಿರುವ ವಿಶಿಷ್ಠ ದೇಶ. ಹಲವಾರು ಭಾಷೆಗಳು, ಆಚಾರ ವಿಚಾರಗಳು, ವೇಷಭೂಷಣಗಳು, ಆಹಾರ ಪದ್ಧತಿಗಳು, ಮತ ಸಂಪ್ರದಾಯಗಳು, ಪೂಜಾ ಪದ್ಧತಿಗಳು ನಾನಾ ರೀತಿಯಲ್ಲಿ ಇದ್ದರೂ ಭಾರತ ಐಕ್ಯತೆಯನ್ನು ಸಾಧಿಸಿದೆ ಎಂದರು.

ಸಾವಿರಾರು ವರ್ಷಗಳ ವಿದೇಶಿ ಆಕ್ರಮಣ ಆಳ್ವಿಕೆಗಳ ಕಾರಣಕ್ಕಾಗಿ ನಮ್ಮ ವಿಚಾರದಲ್ಲಿ ಹಲವು ಗೊಂದಲಗಳು ಸಮಸ್ಯೆಗಳು ಉಂಟಾಗಿವೆ. ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ ಪಿಡುಗುಗಳು ಆಚರಣೆಗಳು, ನಮ್ಮ ಸಮಾಜ ಎದುರಿಸುತ್ತಿರುವ ಪ್ರಸ್ತುತ ಸವಾಲುಗಳಾಗಿವೆ. ಈ ಸಮಸ್ಯೆಗಳನ್ನು ಹುಡುಕಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ನಮ್ಮ ಮೂಲ ಕರ್ತವ್ಯವಾಗಿದೆ ಎಂದರು.


ಭಾರತವನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಲು ನಾವೆಲ್ಲರೂ ಸಾಮಾಜಿಕ ಸದ್ಭಾವನೆ ಮನೋಭಾವನೆ ಹೊಂದುವುದು ಅವಶ್ಯಕ. ನಮ್ಮೆಲ್ಲರ ರಾಷ್ಟ್ರೀಯ ಕರ್ತವ್ಯವಾಗಿದೆ. ಬೆಳೆಯುವ ಮಕ್ಕಳಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ನಾಯಕನಹಳ್ಳಿ ನಂಜಪ್ಪ, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಭಾರತೀಯ ಜೈ ಕಿಸಾನ್ ವಿಭಾಗದ ಮುಖ್ಯಸ್ಥ ಹರೀಶ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೀಣ್, ಮುಖಂಡರಾದ ಮಧುಸೂದನ್, ಸಂವರ್ಧನ ಟ್ರಸ್ಟ್ ಮೈಸೂರು ವಿಭಾಗೀಯ ಸಂಚಾಲಕರಾದ ಚಿಕ್ಕ ಸೋಮನಹಳ್ಳಿ ಪುನೀತ್, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಶ್ರೀನಿವಾಸ್, ರಾಮಚಂದ್ರ, ನಾರಾಯಣಗೌಡ ಪಾಲ್ಗೊಂಡಿದ್ದರು. ನೂರಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ

ಹಲಗೂರು:ಅಂತರವಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರು ಶಿಷ್ಯರ ಬಳಗದಿಂದ ನಡೆದ ಉಚಿತ ಹೃದಯ ರೋಗ ತಪಾಸಣೆ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ ನಡೆಸಲಾಯಿತು.

ಹೃದಯ ರೋಗ ತಜ್ಞ ಎ.ಎಸ್.ನಾಗರಾಜು ಮಾತನಾಡಿ, ಹೃದಯಕ್ಕೆ ಸಂಬಂಧಪಟ್ಟಂತೆ ತಮ್ಮ ಆರೋಗ್ಯ ಕಡೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೀವುಗಳು ಮುಂಜಾಗ್ರತೆ ವಹಿಸಬೇಕು. ನಮಗೆ ಯಾವ ರೋಗಗಳು ಇಲ್ಲ ಎಂದು ನಿರ್ಲಕ್ಷ್ಯ ಮಾಡಬಾರದು ಅವಶ್ಯಕತೆ ಇದ್ದವರಿಗೆ ರಕ್ತ ಪರೀಕ್ಷೆ, ಬಿಪಿ ಪರೀಕ್ಷೆಗಳನ್ನು ಮಾಡಿದ್ದೇನೆ ಎಂದರು.ನಾನು ಇದೇ ಗ್ರಾಮದಲ್ಲಿ ಹುಟ್ಟಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಹೃದಯ ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಗ್ರಾಮದಲ್ಲಿ ಜನರಿಗೆ ತಪಾಸಣೆ ನಡೆಸುತ್ತಿರುವುದು ನನ್ನ ಪುಣ್ಯದ ಕೆಲಸ ಎಂದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಗುರು ಶಿಷ್ಯರ ಬಳಗದಲ್ಲಿ ಸೇರಿಕೊಂಡು ಇಂತಹ ಶಿಬಿರಗಳನ್ನು ನಡೆಸಲಾಗುವುದು ಎಂದರು.

ಗ್ರಾಮೀಣ ಪಟ್ಟಣ ಪ್ರದೇಶಗಳಿಗೆ ಹೋಗಿ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಹೆಚ್ಚು ಹಣ ಖರ್ಚು ಮಾಡುವುದಕ್ಕಿಂತ ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಮಾತನಾಡಿ, ನಾನು ವೃತ್ತಿಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತನಾದ ಮೇಲೆ ನಮ್ಮಿಂದ ವಿದ್ಯೆ ಕಲಿತ ಶಿಷ್ಯಂದಿರು ನನ್ನ ಹೆಸರಿನಲ್ಲಿ ಗುರು ಶಿಷ್ಯರ ಬಳಗ ಎಂಬ ಸಂಘ ಸ್ಥಾಪನೆ ಮಾಡಿ ಹಲವು ಸಾರ್ವಜನಿಕ ಸೇವಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಗುರು ಶಿಷ್ಯರ ಬಳಗದ ಅಧ್ಯಕ್ಷ ದೇವರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ, ಸದಸ್ಯ ಜಿ.ಎಸ್.ಕೃಷ್ಣ, ಶ್ರೀನಾಥ, ಮಹೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.