ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಮಾಜದಲ್ಲಿ ಸಮಾನತೆ ತರಲು ತಮ್ಮ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ಬೇರೆಯವರ ಜೀವನದಲ್ಲಿ ಬದಲಾವಣೆ ತರಲು ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತತ್ಪಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ134ನೇ ಜಯಂತ್ಯುತ್ಸವ ಪ್ರಯುಕ್ತ ಅಂಬೇಡ್ಕರ ಪ್ರತಿಮೆಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. ದೇಶದ ಮೂಲೆ ಮೂಲೆಗೆ ಸಂಚರಿಸಿ, ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದರು. ಸ್ವಾತಂತ್ರ್ಯ ಬಂದು 75 ವರ್ಷರ್ಗಳ ನಂತರವೂ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಲು ಅಂಬೇಡ್ಕರ ಅವರ ಮುಂದಾಲೋಚನೆ ಕಾರಣವಾಗಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತ ಸಮಾಜಗಳ ಧ್ವನಿಯಾಗಿ ನಿಂತು ಅವರಿಗೆ ಸಮಾನತೆ ಸ್ವಾಭಿಮಾನದ ಬದುಕು ದೊರಕುವಂತೆ ಸ್ವಾಭಿಮಾನದ ಸಂಕೇತವಾಗಿ ಹೋರಾಡಿದರು. ಸ್ವಾತಂತ್ರ ನಂತರ ನಮ್ಮ ದೇಶಕ್ಕೆ ಯಾವ ಕಾನೂನುಗಳನ್ನು ಮಾಡಿ ದೇಶವನ್ನು ಮುನ್ನಡಿಸಬೇಕೆಂದು ಯೋಚಿಸಿ ಸಂವಿಧಾನವನ್ನು ರಚಿಸುವ ಮೂಲಕ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನುರಚಿಸಿದ್ದಾರೆ. ಬಸವಣ್ಣವರು ಸಮಾಜದಲ್ಲಿನ ಅನಿಷ್ಟ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾನತೆಯ ಕನಸು ಕಂಡಿದ್ದರು. ಅವರ ಆಸೆಯದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಸಮಾನ ಹಕ್ಕು ನೀಡುವ ನೀಡುವ ಮೂಲಕ ಮಾದರಿಯಾದರು. ದಲಿತ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡುವುದಕ್ಕೆ ಮುಂದಾಗಬೇಕು. ಅಂದಾಗ ಮಾತ್ರ ಆ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.ದಲಿತ ಸಾಹಿತಿಗಳಾದ ಪರುಶುರಾಮ ಕೊಣ್ಣೂರ ಹಾಗೂ ಹರೀಶ ನಾಟಿಕಾರ ಪ್ರಾಸ್ಥಾವಿಕವಾಗಿ ಮಾತನಾಡಿ, ವಿಶ್ವದಲ್ಲಿಯೇ ಬಹುತೇಕ ರಾಷ್ಟ್ರಗಳು ಆಗಾಗ ಸಂವಿಧಾನವನ್ನು ಬದಲಾಯಿಸುತ್ತವೆ. ಆದರೆ, ಭಾರತ ಸಂವಿಧಾನ 75ವರ್ಷ ಗತಿಸಿದರು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ನ್ಯಾಯ ಅನ್ನುವ ನಾಲ್ಕು ಕಂಬಗಳು ನಿಂತುಕೊಂಡಿದ್ದಲ್ಲದೇ ಅಂಬೇಡ್ಕರವರ ಸಾಧನೆಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಪ್ರಾಧ್ಯಾಪಕ ಆರ್.ಎಚ್.ಸಜ್ಜನ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ಎನ್.ಎಸ್.ಮಸಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಬಸಂತಿ ಮಠ, ಸಿಪಿಐ ಮೊಹಮ್ಮದ ಫಸಿವುದ್ಧಿನ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಶಾಂತಗೌಡ ಪಾಟೀಲ(ನಡಹಳ್ಳಿ) ಚಲವಾದಿ ಸಮಾಜದ ಅಧ್ಯಕ್ಷ ರೇವಣಪ್ಪ ಚಲವಾದಿ, ಬಲಭೀಮ ನಾಯಕಮಕ್ಕಳ, ಭಗವಂತ ಕಬಾಡೆ, ವೈ.ಎಚ್.ವಿಜಯಕರ, ಶ್ರೀಕಾಂತ ಚಲವಾದಿ, ನಾಗೇಶ ಭಜಂತ್ರಿ, ಸತೀಶ ಓಸ್ವಾಲ, ಅಶೋಕ ಇರಕಲ್ಲ, ನಾನಪ್ಪ ನಾಯಕ, ಸಿ.ಎಸ್.ಬಿರಾದಾರ, ಡಿ.ಬಿ.ಮೂದೂರ, ದೇವರಾಜ ಹಂಗರಗಿ, ಪ್ರಶಾಂತ ಕಾಳೆ, ಶೇಖು ಆಲೂರ, ತಿಪ್ಪಣ್ಣ ದೊಡಮನಿ, ಪ್ರಕಾಶ ಸರೂರ, ಶಿವಪುತ್ರ ಅಜಮನಿ, ಶಿವು ಶಿವಪುರೆ ಸೇರಿ ಹಲವರು ಇದ್ದರು. ಪರುಶುರಾಮ ಕೊಣ್ಣೂರ ನಿರೂಪಿಸಿ, ವಂದಿಸಿದರು, ವೈ.ಎಚ್.ವಿಜಯಕರ ಸ್ವಾಗತಿಸಿದರು. ಗೌತಮ ಬುದ್ಧ ಟ್ರಸ್ಟ್‌ನಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.