ಸ್ವಾಮಿ ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಿ: ಪಾರ್ವತಿ ಸೋನಾರೆ

| Published : Jan 15 2024, 01:47 AM IST

ಸಾರಾಂಶ

ಬೀದರ್‌ನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ವಿವೇಕಾನಂದರ ಆದರ್ಶ ಗುಣಗಳನ್ನು ಯುವಜನರು ಮೈಗೂಡಿಸಿಕೊಳ್ಳಲಿ ಎಂದು ಸಾಹಿತಿ ಪಾರ್ವತಿ ಸೋನಾರೆ ಹೇಳಿದರು.

ನಗರದ ಜನವಾಡ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಜಗತ್ತಿನ ಮಹಾತ್ಮರನ್ನು ತಯಾರು ಮಾಡುವ ಮಹತ್ತರ ಸಾಧನವೇ ಹೆಣ್ಣು. ಆಕೆ ಕೊಡುವ ಸಂಸ್ಕಾರ ಹಾಗೂ ಸಂಸ್ಕೃತಿಯಿಂದ ಜಗತ್‌ ಪ್ರಸಿದ್ಧಿ ಪಡೆಯಲು ಸಾಧ್ಯವಾಗಲಿದೆ. ತಾಯಿ ಭುವನೇಶ್ವರಿ ದೇವಿಯು ವಿವೇಕಾನಂದರಿಗೆ ಜನ್ಮ ನೀಡಿದರೆ ಮಾತೆ ಶಾರದಾದೇವಿಯು ಅವರಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರು. ಅವರಿಬ್ಬರ ಫಲಶ್ರುತಿಯಿಂದ ವಿವೇಕಾನಂದರ ಸಿಡಿಲು ಸನ್ಯಾಸಿಯಾಗಿ, ಸದ್ವಿನಯದ ಸಾಕಾರ ಮೂರ್ತಿಯಾಗಿ ಹಾಗೂ ಮಾಣಿಕ್ಯದ ದೀಪ್ತಿಯಂತೆ ಹೊರ ಹೊಮ್ಮಿದರು ಎಂದರು.

ಇಂದಿನ ಯುವಜನರು ಮುಂದಿನ ಪ್ರಜೆಗಳು. ಭಾರತದ ಭವಿಷ್ಯ ಯುವಜನರ ಮೇಲಿದ್ದು, ಉನ್ನತ ಗುರಿ ಹಾಗೂ ಶ್ರೇಷ್ಠ ಗುರುವಿನ ಮಾರ್ಗದರ್ಶನದಿಂದ ನೈಜ ಬದುಕು ರೂಪಿಸಿಕೊಳ್ಳುವ ಮಹತ್ವಕಾಂಕ್ಷೆ ಬೆಳೆಂಸಿಕೊಳ್ಳುವಂತೆ ಪಾರ್ವತಿ ಸೋನಾರೆ ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಜಕುಮಾರ ಮಾತನಾಡಿ, ಒಂದು ಇತಿಹಾಸ ಗಟ್ಟಿಯಾಗಬೇಕಾದರೆ ಅದರ ಮುಖ್ಯ ರೂವಾರಿ ಶ್ರೇಷ್ಠರಾಗಬೇಕು. ಆಗ ಮಾತ್ರ ಜಗತ್ತು ಅದನ್ನು ಅನುಸರಿಸುತ್ತದೆ. ಹಾಗೆಯೇ ವಿವೇಕಾನಂದರು ಅಂದು ಅಮೆರಿಕಾದಲ್ಲಿ ಹೇಳಿದ ಆ ಎರಡು ವಾಕ್ಯಗಳು ಇಂದಿಗೂ ಜಗತ್ತು ಪ್ರಶಂಸಿಸುತ್ತಿದೆ ಅದರಿಂದ ಭಾರತ ವಿಶ್ವದ ಮುಂದೆ ಎದೆ ತಟ್ಟಿ ನಿಲ್ಲಲ್ಲು ಸಾಧ್ಯವಾಗಿದೆ ಎಂದರು.

ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಜನವರಿ 12 ವಿವೇಕಾನಂದರ ಜನ್ಮದಿನ. ಕಬ್ಬಿಣದಂಥ ಶರೀರ, ಸಿಡಿಲಿನಂತಹ ಧ್ವನಿ ಹಾಗೂ ಉಕ್ಕಿನಂತಹ ಧೈರ್ಯ ಬೆಳೆಸಿಕೊಂಡಲ್ಲಿ ವಿವೇಕರ ನಿಜವಾದ ವಾರಸುದಾರರಾಗಲು ಸಾಧ್ಯವಿದೆ ಎಂದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಶಿವಯ್ಯ ಸ್ವಾಮಿ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ವಿರುಪಾಕ್ಷ ಗಾದಗಿ ಮಾತನಾಡಿದರು. ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಓಂಪ್ರಕಾಶ ರೊಟ್ಟೆ, ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಸ್ವಾಮಿ, ಮಹೇಶ ಗೋರ್ನಾಳಕರ್‌, ಸುನೀಲ ಬಾವಿಕಟ್ಟಿ, ಯುವ ಸಂಘ, ಸಂಸ್ಥೆಗಳ ಒಕ್ಕೂಟದ ಗೌರವಾದ್ಯಕ್ಷ ವಿಜಯಕುಮಾರ ಸೋನಾರೆ ಇದ್ದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮೌಲಪ್ಪ ಮಾಳಗೆ ಸ್ವಾಗತಿಸಿ ನಿರೂಪಿಸಿದರೆ ಇಲಾಖೆಯ ಸಿಬ್ಬಂದಿ ಖುದ್ದೂಸ್‌ ವಂದಿಸಿದರು. ಸಿಬ್ಬಂದಿಗಳಾದ ಪದ್ಮಾವತಿ, ಸತೀಶ, ಕಾಲೇಜಿನ ಎಲ್ಲ ಪ್ರಾಧ್ಯಾಪಕ ವೃಂದದವರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.