ಗಾಂಧೀಜಿ ಹಾಗೂ ಶಾಸ್ತ್ರೀಜಿ ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಹೊಸಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತತ್ವಾದರ್ಶ ಹಾಗೂ ಚಿಂತನೆ ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಗಾಂಧೀಜಿ ಹಾಗೂ ಶಾಸ್ತ್ರೀಜಿ ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲು ಸರ್ಕಾರದ ಜತೆಗೆ ಸಮಾಜದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ಸರಳ ಜೀವನ ಹಾಗೂ ಉನ್ನತ ಆಲೋಚನೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಜೀವನದ ಪ್ರಮುಖ ತತ್ವಗಳಾಗಿದ್ದವು. ತಲುಪಬೇಕಾದ ಗುರಿ ಉತ್ತಮವಾಗಿರುವುದರ ಜತೆಗೆ ಆ ಗುರಿ ತಲುಪುವ ಮಾರ್ಗವೂ ಅಷ್ಟೇ ಶ್ರೇಷ್ಠವಾಗಿರಬೇಕು ಎಂಬುದನ್ನು ಮಹಾತ್ಮರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ.ಅವರ ತತ್ವ ಮತ್ತು ಚಿಂತನೆ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.ವಿಜೇತರಿಗೆ ಬಹುಮಾನ
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ಪ್ರೌಢಶಾಲೆ ವಿಭಾಗದಲ್ಲಿ ಬಿ.ಎಸ್. ಪ್ರಸನ್ನ, ಸುಮಯ್ಯ ಭಾನು, ಮಲ್ಲಮ್ಮ, ಪದವಿ ಪೂರ್ವ ವಿಭಾಗದಲ್ಲಿ ಜ್ಯೋತಿ, ಜಿ. ದೀಕ್ಷಿತ, ಎಸ್.ಕವಿತಾ ಹಾಗೂ ಪದವಿ ವಿಭಾಗದ ಆರ್. ಸಂಜನಾ, ಅನಿತಾ. ಡಿ, ಈ.ಉಮಾದೆವಿ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಅನುಕ್ರಮವಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಗೌರವ ಸಂಭಾವನೆ ವಿತರಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್ಪಿ ಎಸ್.ಜಾಹ್ನವಿ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.