ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಯುವಜನತೆ ತಮ್ಮ ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು ಎಂದು ಎಂದು ಮೈಸೂರು ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಟಿ.ಕೆ. ಕೆಂಪೇಗೌಡ ಕರೆ ನೀಡಿದರು.ಹೋಬಳಿಯ ಬಿದರೂರು ಗ್ರಾಮದಲ್ಲಿ ಕೊಣನೂರಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆ ಯುವಜನತೆಗೆ ಭವಿಷ್ಯದಲ್ಲಿ ಸ್ವಾವಲಂಬಿಯಾಗುವ ಅರಿವನ್ನು ಮೂಡಿಸುತ್ತದೆ. ಸ್ವಾಮಿ ವಿವಬೇಕಾನಂದರ ಹೇಳಿಕೆಯಂತೆ ನಾನು ಇರುವುದು ಪರರ ಸೇವೆಗೆ ಎಂಬಂತೆ ಯುವಜನತೆ ತಮಗಾಗಿ ಅಷ್ಟೇ ಅಲ್ಲದೆ ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ತಮ್ಮ ಶಕ್ತಿಯನ್ನು ಗುರುತಿಸಿಕೊಳ್ಳುವ ಜವಾಬ್ದಾರಿ ಯುವಜನತೆಯ ಮೇಲಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗದೇ ಆಚಾರ, ವಿಚಾರಗಳನ್ನು ಕುರಿತು ಚಿಂತನೆ ಮಾಡುವ, ದಿನಚರಿಯನ್ನು ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾಜೀವ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸಮಾಜದ ಋಣವನ್ನು ತೀರಿಸಲು ಇರುವ ಒಂದು ವೇದಿಕೆ. ಇದರಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆ. ಯುವಜನತೆ ಮೊಬೈಲ್ ಚಟದಿಂದ ಹೊರಬಂದು ಈ ತರಹದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.ಶಿಬಿರಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಿಡಿಸಿ ಉಪಾಧ್ಯಕ್ಷ ಎಸ್.ಸಿ.ಚೌಡೇಗೌಡ, ಚಿಕ್ಕಹಳ್ಳಿ ಗ್ರಾ.ಪಂ ಅಧ್ಯಕ್ಷ ಎಚ್.ಎನ್. ಮಹೇಶ್, ಮಾಜಿ ಅಧ್ಯಕ್ಷೆ ಯಶೋಧ ಕೃಷ್ಣ, ಸದಸ್ಯ ರಾಜೇಗೌಡ, ಅರ್ಪಿತ ಮನು, ನಿಂಗಪ್ಪ, ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಟಿ.ಕೆ. ಲತ ಬಸವರಾಜು, ಶಿಬಿರಾಧಿಕಾರಿ ವಿ.ಡಿ. ಗುರುಪ್ರಸಾದ್, ಶಿಬಿರದ ಮಾರ್ಗದರ್ಶಕ ಬಿ.ಎನ್. ಲಕ್ಷ್ಮೀಶ ಸಹಶಿಬಿರಾಧಿಕಾರಿಗಳಾದ ಸುಶ್ಮಿತ, ಸುರೇಶ್, ಗ್ರಾಮದ ಮುಖಂಡರುಗಳಾದ ಯಜಮಾನ್ ರಾಜೇಗೌಡ್ರು, ಮಿಲ್ ನಿಂಗಪ್ಪ, ವಾಲಿ ರಾಮೇಗೌಡ, ಅಣ್ಣಯ್ಯ, ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಮತ್ತು ಸಿಬ್ಬಂದಿ ವರ್ಗ, ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.