ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳಿ

| Published : Jan 02 2025, 12:32 AM IST

ಸಾರಾಂಶ

ದಾಬಸ್‍ಪೇಟೆ: ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿದ್ಯಾಸ್ಪೂರ್ತಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಉಮಾಶಂಕರ್ ತಿಳಿಸಿದರು.

ದಾಬಸ್‍ಪೇಟೆ: ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿದ್ಯಾಸ್ಪೂರ್ತಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಉಮಾಶಂಕರ್ ತಿಳಿಸಿದರು.

ಪಟ್ಟಣದ ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು. ಕುವೆಂಪು ರಚಿಸಿದ ನಾಡಗೀತೆ ದಿನನಿತ್ಯ ಹಾಡುವ ಮೂಲಕ ಪ್ರತಿದಿನ ಅವರನ್ನು ಸ್ಮರಿಸುತ್ತಿದ್ದೇವೆ ಎಂದರು.

ಶಾಲಾ ಆಡಳಿತ ಮಂಡಳಿ ಸಿಇಒ ವರುಣ್ ಕುಮಾರ್ ಮಾತನಾಡಿ, ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಕರುನಾಡಿಗೆ ತಂದುಕೊಟ್ಟ ಶ್ರೇಷ್ಠ ಕವಿ ಕುವೆಂಪು. ಮನುಷ್ಯ ಕರ್ತವ್ಯದೊಂದಿಗೆ ತನ್ನ ಜೀವನವನ್ನು ಹೇಗೆ ಆದರ್ಶವಾಗಿಟ್ಟುಕೊಳ್ಳಬೇಕು ಎಂಬುದನ್ನು ಅವರ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಕಾಣಬಹುದಾಗಿದೆ. ಶಾಲಾ ಮಕ್ಕಳು ಕುವೆಂಪು ಸಾಹಿತ್ಯ ಓದಲು ಶಿಕ್ಷಕರು ಪ್ರೇರೇಪಿಸಬೇಕು. ಮಾನವೀಯ ಮೌಲ್ಯಗಳ ಬೆಲೆ ಮಕ್ಕಳಿಗೆ ಅರಿವಾಗುತ್ತದೆ ಎಂದು ಹೇಳಿದರು.

ವಸ್ತು ಪ್ರದರ್ಶನ:

ಇದೇ ಸಂದರ್ಭದಲ್ಲಿ ಕುವೆಂಪು ರಚಿಸಿರುವ ಸಾಹಿತ್ಯ, ಕಥೆ, ಕಾದಂಬರಿಗಳ ಅವರ ವೈಚಾರಿಕತೆಯ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕುವೆಂಪು ಅವರ ಭಾವಗೀತೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ರಾಮಚಂದ್ರ, ವ್ಯವಸ್ಥಾಪಕ ಸೋಮಶೇಖರ್, ಪ್ರಾಂಶುಪಾಲರಾದ ವನಜಾಕ್ಷಿ, ದಿಲೀಪ್ ಕುಮಾರ್, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.