ಪರೋಪಕಾರದ ಸದ್ಗುಣ ಮೈಗೂಡಿಸಿಕೊಳ್ಳಿ: ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

| Published : Aug 18 2025, 12:00 AM IST

ಪರೋಪಕಾರದ ಸದ್ಗುಣ ಮೈಗೂಡಿಸಿಕೊಳ್ಳಿ: ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಸಾಹಿತ್ಯದ ಜೀವನ ಮೌಲ್ಯಗಳು ನಮ್ಮ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಜಾನಪದ ಸಾಹಿತ್ಯದ ಜೀವನ ಮೌಲ್ಯಗಳು ನಮ್ಮ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಗ್ಗಿನಮಠದ ಸಭಾಭವನದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದಿನ ನಮ್ಮ ಪೂರ್ವಜರು ಮನದಲ್ಲಿಯೇ ಜೀವನದ ಅನುಭವದ ಕಥೆ ಕಟ್ಟಿ ಹಾಡಿನ ಮೂಲಕ ಜೀವನ ಮೌಲ್ಯ ಬಾಯಿಂದ ಬಾಯಿಗೆ ಹರಿದಾಡಿಸುತ್ತ ನಿರಂತರವಾಗಿ ಮಾನವನ ಜೀವನ ಸಂಸ್ಕಾರಕ್ಕೆ ದಾರಿ ತೋರುತ್ತಿದ್ದ ಕಾಲವಿತ್ತು ಎಂದು ನುಡಿದರು.

ಶ್ರೀಮಂತಿಕೆ ಇರಲಿ, ಬಡತನವೇ ಇರಲಿ, ನೆಮ್ಮದಿಯ ಬದುಕನ್ನು, ಶಾಂತಿಯ ಬಾಳನ್ನು ಕಳೆಯುವಲ್ಲಿ ಜನಪದರು ನಿಜಕ್ಕೂ ಜಾಣರಿದ್ದರು. ಆದರೆ ಇಂದಿನ ದಿನಗಳಲ್ಲಿ ಮನುಷ್ಯನ ಆಸೆಯು ಮಿತಿಮೀರಿದೆ, ಎಷ್ಟೇ ಸವಲತ್ತುಗಳಿದ್ದರೂ ನೆಮ್ಮದಿ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂದಿನ ನವಯುಗದ ಮಾನವರು, ಅಂದಿನ ಪರೋಪಕಾರದ ಸದ್ಗುಣಗಳಿಂದ ಕೂಡಿದ ನಮ್ಮ ಪೂರ್ವಜರ ಬದುಕನ್ನು ಮೈಗೂಡಿಸಿಕೊಳ್ಳಬೇಕು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ತೆಗ್ಗಿನಮಠ ಸಂಸ್ಥಾನವು ನಾಡಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದಲ್ಲದೇ ಹಿಂದುಳಿದ ಹರಪನಹಳ್ಳಿ ತಾಲೂಕಿನಲ್ಲಿ ಎಲ್ಲ ವರ್ಗದ ಬಡ ಜನರಿಗೆ ಶಿಕ್ಷಣಧಾರೆ ಎಳೆದು ಮುಖ್ಯವಾಹಿನಿಗೆ ತರಲು ಶ್ರಮಿಸಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಎಂ. ರಾಜಶೇಖರ ಮಾತನಾಡಿದರು.

ನಿವೃತ್ತ ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತೆಗ್ಗಿನಮಠದ ಆಡಳಿತಾಧಿಕಾರಿ ಡಾ. ಟಿ.ಎಂ. ಚಂದ್ರಶೇಖರಯ್ಯ, ಸಮಾಜ ಸೇವಕಿ ಎಚ್.ಎಂ. ಲಲಿತಮ್ಮ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪಿ.ಬಿ. ಗೌಡ, ಉದ್ಯಮಿ ಉತ್ತಮಚಂದ್ ಜೈನ್, ಟಿ.ಎಂ. ವೀರೇಂದ್ರಸ್ವಾಮಿ, ಟಿ.ಎಂ. ರಾಜಶೇಖರ, ಸಿ.ಎಂ. ಕೊಟ್ರಯ್ಯ, ಪ್ರತೀಕ್ ಸೇರಿದಂತೆ ಮತ್ತಿತರರಿದ್ದರು.