ಸಾರಾಂಶ
ಬೆಂಗಳೂರು : ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಶನಿವಾರ ಸುರಿದ ಧಾರಾಕಾರ ಮಳೆಗೆ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಕಳೆದ ಎರಡು ವಾರದಿಂದ ನಗರದಲ್ಲಿ ಮಳೆ ವಿರಾಮ ನೀಡಿತ್ತು. ಶನಿವಾರ ಬೆಳಗ್ಗೆ ಮಳೆಯ ಮುನ್ಸೂಚನೆ ಇರಲಿಲ್ಲ. ಆದರೆ, ವಿಪರೀತ ಸೆಕೆ ಮತ್ತು ಬಿಸಿಲ ತಾಪದ ಅನುಭವ ಉಂಟಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋಡ ಕವಿದ ವಾತಾರಣ ಸೃಷ್ಟಿಯಾಗಿ ಎರಡು ಗಂಟೆ ಸುಮಾರಿಗೆ ನಗರದ ಅಲ್ಲಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ಬಳಿಕ ಇಡೀ ನಗರವನ್ನು ವ್ಯಾಪಿಸಿತು.
ನಗರದ ಹೊರ ವಲಯದಲ್ಲಿ ಮಧ್ಯಾಹ್ನ ಧಾರಾಕಾರ ಮಳೆ ಸುರಿದ ಪರಿಣಾಮ ಮಾರತ್ತಹಳ್ಳಿ, ಸರ್ಜಾಪುರ, ಇಂದಿರಾನಗರ, ನಾಗವಾರ ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ವಾಹನ ಸವಾರು ಫ್ಲೈಓವರ್ ಕೆಳ ಭಾಗದಲ್ಲಿ ನಿಂತುಕೊಂಡು ಮಳೆಯಿಂದ ರಕ್ಷಣೆ ಪಡೆದ ದೃಶ್ಯಗಳು ಕಂಡು ಬಂದವು.
ಮನೆಗಳಿಗೆ ನೀರು: ಬೊಮ್ಮನಹಳ್ಳಿಯ ಸಾರಕ್ಕಿ ಸಿಗ್ನಲ್ ಬಳಿಯ ರಾಮಕೃಷ್ಣನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಸಯಾದಬಾದ್‌ನಲ್ಲಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿರುವುದರಿಂದ ಡ್ರೈನ್ ಬ್ಲಾಕೇಜ್ ಆಗಿ ಮಳೆ ನೀರಿನೊಂದಿಗೆ ಕೊಳಚೆ ನೀರು ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು, ಮನೆ ನೀರು ನುಗ್ಗದಂತೆ ಏನೆಲ್ಲಾ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಕೆಲವರು ಮನೆಯ ಮೇಲಿನ ಮಹಡಿಯಲ್ಲಿ ಆಶ್ರಯ ಪಡೆದರು. ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ ನಂತರ ನಿವಾಸಿಗಳು ನಿಟ್ಟುಸಿರು ಬಿಟ್ಟರು.
ರಸ್ತೆಗಳಲ್ಲೇ ತುಂಬಿ ನೀರು
ಶನಿವಾರ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ರಸ್ತೆಗಳು ಅಕ್ಷರಶಃ ನದಿಗಳಂತೆ ಕಂಡು ಬಂದವು. ಕೆಲವು ಕಡೆ ಪಾದಚಾರಿಗಳು ರಸ್ತೆ ದಾಟುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಫ್ಲೈಓವ್ ಮತ್ತು ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ಶೇಖರಣೆಯಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಮಾರತ್ತಹಳ್ಳಿಯ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದ ಹಿನ್ನೆಲೆಯಲ್ಲಿ ಜನರು ಮತ್ತು ವಾಹನ ಸವಾರರು ಪರದಾಡಿದರು. ರಸ್ತೆಯ ಅಕ್ಕ-ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿತ್ತು. ವಾಹನ ಸವಾರರು ಬೈಕ್ ಮತ್ತು ಕಾರುಗಳನ್ನು ಪಾದಚಾರಿ ಮಾರ್ಗದಲ್ಲಿ ಓಡಿಸಿಕೊಂಡು ಹೋಗುವ ದೃಶ್ಯಗಳು ಕಂಡು ಬಂದವು.
ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮಳೆ ನೀರು ಚರಂಡಿಗೆ ಹರಿದು ಹೋಗುವ ಜಾಗದಲ್ಲಿ ಕಸ, ಕಡ್ಡಿ ಕಟ್ಟಿಕೊಂಡ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ನೀರು ಶೇಖರಣೆಯಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬರು ಕಸ ಕಡ್ಡಿ ಸ್ವಚ್ಛಗೊಳಿಸಿದ ಬಳಿಕ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಿ ವಾಹನ ಸಂಚಾರ ಸುಗಮಗೊಂಡಿದೆ.
ಮರ, ಕೊಂಬೆ ಧರೆಗೆ
ಭಾರೀ ಪ್ರಮಾಣ ಗಾಳಿ ಬೀಸಿದ ಪರಿಣಾಮ ನಗರದ ಸುಲ್ತಾನ್ ಪಾಳ್ಯ, ಯಲಹಂಕ, ಯಶವಂತಪುರ ಸೇರಿದಂತೆ ಹಲವು ಕಡೆ ಮರ ಮತ್ತು ಮರ ಕೊಂಬೆಗಳು ಧರೆಗುರುಳಿದ ಬಗ್ಗೆ ವರದಿಯಾಗಿದೆ. ನಾಗವಾರ ಮುಖ್ಯ ರಸ್ತೆಯಲ್ಲಿ ಭಾರಿ ಗಾತ್ರದ ಮರ ಮಳೆಯಿಂದ ಧರೆಗುರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು.
ಆಲಿಕಲ್ಲು ಮಳೆ?:
ನಗರದ ಕೋಣನಕುಂಟೆ ಸೇರಿದಂತೆ ಕೆಲವು ಭಾಗದಲ್ಲಿ ಆಲಿಕಲ್ಲು ಮಳೆ ಸುರಿದ ವರದಿಯಾಗಿದೆ. ಆಲಿಕಲ್ಲುಗಳನ್ನು ಜನರು ಸಂಗ್ರಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸರಾಸರಿ 2.4 ಸೆಂ.ಮೀ ಮಳೆ:
ನಗರದಲ್ಲಿ ಶನಿವಾರ ಸರಾಸರಿ 2.4 ಸೆಂ.ಮೀ ಮಳೆಯಾದ ವರದಿಯಾಗಿದೆ. ಭಾನುವಾರವೂ ನಗರದಲ್ಲಿ 1.5 ಸೆಂ.ಮೀ ನಷ್ಟು ಮಳೆಯಾಗಬಹುದು. ಗಂಟೆಗೆ 15 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿಅತೀ ಹೆಚ್ಚು 7.6 ಸೆಂಮೀ ಮಳೆ
ಶನಿವಾರ ರಾತ್ರಿ 10 ಗಂಟೆಯ ಮಾಹಿತಿ ಪ್ರಕಾರ ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅತಿ ಹೆಚ್ಚು 7.6 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಹೊರಮಾವು 6, ವಿದ್ಯಾಪೀಠ 5.8, ಹಂಪಿನಗರ ಹಾಗೂ ಹೇರೋಹಳ್ಳಿ ತಲಾ 5.6, ದೊಡ್ಡಬಿದರಕಲ್ಲು 5.3, ಜಕ್ಕೂರು, ಕೊಟ್ಟಿಗೆಹಳ್ಳಿ ತಲಾ 4.9, ನಾಯಂಡನಹಳ್ಳಿ 4.8, ಆರ್.ಆರ್.ನಗರ 4.7, ಚೊಕ್ಕಸಂದ್ರ 4.6, ವಿಶ್ವನಾಥ ನಾಗೇನಹಳ್ಳಿ 4.4, ಹೆಮ್ಮಿಗೆಪುರ ಹಾಗೂ ಮಾರುತಿ ಮಂದಿರ ವಾರ್ಡ್ ತಲಾ 4.2, ಎಚ್‌ಎಎಲ್ 4.1, ಯಲಹಂಕ ಹಾಗೂ ವಿದ್ಯಾರಣ್ಯಪುರದಲ್ಲಿ 4 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ನಗರದ ವಿವಿಧ ಭಾಗದಲ್ಲಿ 4 ರಿಂದ 1 ಸೆಂ.ಮೀ ವರೆಗೆ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
ಮರ ಬಿದ್ದ ವಿವರಶನಿವಾರದ ಮಳೆಗೆ ಮರ ಮತ್ತು ಕೊಂಬೆ ಬಿದ್ದ ವಿವರ
ವಲಯಮರಕೊಂಬೆಪಶ್ಚಿಮ22ದಕ್ಷಿಣ110ಪೂರ್ವ22ಆರ್. ಆರ್.ನಗರ25ಬೊಮ್ಮನಹಳ್ಳಿ04ಮಹದೇವಪುರ11ಯಲಹಂಕ08ದಾಸರಹಳ್ಳಿ10ಒಟ್ಟು932