ಸಾರಾಂಶ
ಕುರುಗೋಡು: ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದರೂ ಯಥಾಸ್ಥಿತಿಯಲ್ಲಿರುವ ಎಮ್ಮಿಗನೂರು ಬೈಪಾಸ್ ಹತ್ತಿರದ ಬಸ್ ನಿಲ್ದಾಣ ಉದ್ಘಾಟನೆ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.೨೦೧೭-೧೮ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಂದಾಜು ₹೧೬ ಲಕ್ಷ ಅನುದಾನದಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣ ಮಾಡಿ ವರ್ಷದ ಮೇಲಾಗಿದೆ. ಆದರೆ ಈ ವರೆಗೂ ಉದ್ಘಾಟನೆಯಾಗಿಲ್ಲ.ಎಮ್ಮಿಗನೂರು ತಾಲೂಕಿನ ದೊಡ್ಡ ಗ್ರಾಪಂಗಳಲ್ಲಿ ಒಂದು. ೧೮ ಸಾವಿರ ಜನಸಂಖ್ಯೆ ಹೊಂದಿದೆ. ೩೫ ಸದಸ್ಯರ ಬಲ ಹೊಂದಿದೆ. ತಾಲೂಕಿನ ದೊಡ್ಡ ಜಿಪಂ ಕ್ಷೇತ್ರದ ಸ್ಥಾನ ಹೊಂದಿರುವ ಏಕೈಕ ಗ್ರಾಮ ಇದು. ಸುತ್ತಮುತ್ತಲಿನ ವ್ಯಾಪಾರ-ವಹಿವಾಟಿನ ಕೇಂದ್ರ.
ಹಳೇನಿಲ್ದಾಣ: ಎಮ್ಮಿಗನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ಸ್ಥಳ ಇದಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಹಲವು ವಿದ್ಯಾರ್ಥಿಗಳು ಇಲ್ಲಿಂದಲೇ ಬಸ್ ಹಿಡಿದು ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಗ್ರಾಮದ ಇಲ್ಲಿನ ಹೃದಯ ಭಾಗದಲ್ಲಿರುವ ಈ ನಿಲ್ದಾಣ ಸಮರ್ಪಕವಾಗಿ ಜನರ ಬಳಕೆಗೆ ಸಿಗುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಪ್ರಯಾಣಿಕರು ರಣಬಿಸಿಲು, ಮಳೆ ಲೆಕ್ಕಿಸದೇ ಈ ನಿಲ್ದಾಣದ ಸುತ್ತಮುತ್ತ ಆಶ್ರಯ ಪಡೆಯಬೇಕಿದೆ.ಈ ಬಸ್ ನಿಲ್ದಾಣ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪವೂ ಕೇಳಿಬಂದಿದೆ. ಜತೆಗೆ ಅಗತ್ಯ ವ್ಯವಸ್ಥೆ ಇಲ್ಲಿ ಇಲ್ಲ. ಸ್ವಚ್ಛತೆ ಮಾಡುತ್ತಿಲ್ಲ. ನೀರಿನ ತೊಟ್ಟಿ ನಿರುಪಯುಕ್ತವಾಗಿದೆ. ಕಟ್ಟಡದ ಸುತ್ತಮುತ್ತ ಹಲವರು ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬರುತ್ತಿದೆ. ಸಂಜೆಯಾದರೆ ಸಾಕು, ಈ ಬಸ್ ನಿಲ್ದಾಣ ಮದ್ಯಪ್ರಿಯರ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಇಲ್ಲಿ ಬಿದ್ದಿರುವ ಮದ್ಯದ ಪೌಚ್, ಗುಟುಕಾ, ಸಿಗರೇಟಿನ ತುಂಡುಗಳು ನಿಲ್ದಾಣದ ಪರಿಸ್ಥಿತಿಗೆ ಸಾಕ್ಷಿ ಹೇಳುತ್ತವೆ.
ಸುತ್ತಮುತ್ತಲಿನ ಶ್ರೀರಾಮಚಂದ್ರ ಕ್ಯಾಂಪ್, ರ್ವಾವಿ, ನೆಲ್ಲುಡಿ, ಸೋಮಲಾಪುರ, ಬಳ್ಳಾಪುರ, ಸೂಗೂರು, ಮದ್ದಟ್ಟೂರು, ಚನ್ನಪಟ್ಟಣ, ಎಚ್. ವೀರಾಪುರ ಗ್ರಾಮಗಳ ಪ್ರಯಾಣಿಕರಿಗೆ ಈ ನಿಲ್ದಾಣ ಆಸರೆಯಾಗಿದೆ. ಆದರೆ ಈಗ ಅನೈತಿಕ ಚಟುವಟಿಕೆ ತಾಣವಾಗಿದೆ.ಕೂಡಲೇ ಬಸ್ ನಿಲ್ದಾಣಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿ, ಉದ್ಘಾಟಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅದಷ್ಟು ಬೇಗ ಈ ನಿಲ್ದಾಣ ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕು. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಹಾಲಿ ಇರುವ ಹಳೆಯ ಬಸ್ ನಿಲ್ದಾಣ ಕಿರಿದಾಗಿದೆ ಎಂದು ಎಮ್ಮಿಗನೂರು ವಿದ್ಯಾರ್ಥಿಗಳು ಹೇಳಿದರು.ಈ ಬಸ್ ನಿಲ್ದಾಣದ ಒಳಗೆ ವಾಹನ ಬರುವ ರಸ್ತೆ ಅವೈಜ್ಞಾನಿಕವಾಗಿದೆ. ಸರ್ಕಾರದ ಹಣ ಪೋಲಾಗಿದೆ ಎಂದು ಎಮ್ಮಿಗನೂರು ಗ್ರಾಮಸ್ಥ ಜಡೇಪ್ಪ ಹೇಳಿದರು.