ಭಾವನೆಯೇ ಬದುಕಿನ ಸಾರ-ತಿರುಳು: ರಾಘವೇಶ್ವರ ಭಾರತೀ ಶ್ರೀ

| Published : May 11 2025, 01:22 AM IST

ಸಾರಾಂಶ

ಎಷ್ಟೇ ಹಣ, ಐಶ್ವರ್ಯ ಅಂತಸ್ತು ಇದ್ದರೂ ಉತ್ತಮ ಮನಸು, ಭಾವುಕತೆ ಇಲ್ಲದಿದ್ದರೆ ಉತ್ತಮ ವ್ಯಕ್ತಿಯಾಗಲಾರ.

ಭಟ್ಕಳ: ಎಷ್ಟೇ ಹಣ, ಐಶ್ವರ್ಯ ಅಂತಸ್ತು ಇದ್ದರೂ ಉತ್ತಮ ಮನಸು, ಭಾವುಕತೆ ಇಲ್ಲದಿದ್ದರೆ ಉತ್ತಮ ವ್ಯಕ್ತಿಯಾಗಲಾರ. ಪ್ರತಿಯೊಬ್ಬರೂ ಉತ್ತಮ ಮನಸು, ಭಾವುಕತೆ ಹೊಂದಬೇಕು. ಭಾವುಕತೆಯ ಮನಸು ಹೊಂದಿದ್ದರೆ ದೇವರು, ಗುರುಗಳನ್ನೂ ಒಲಿಸಿಕೊಳ್ಳಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಹೇಳಿದರು.

ಅವರು ಶನಿವಾರ ಪಟ್ಟಣದ ಮಣ್ಕುಳಿಯ ನಿವೃತ್ತ ಶಿಕ್ಷಕ ಗಜಾನನ ಯಾಜಿಯವರ ಮನೆಯಲ್ಲಿ ಪಾದಪೂಜೆ ಮತ್ತು ಭಿಕ್ಷೆಯ ನಂತರದಲ್ಲಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಭಾವುಕತೆ, ಉತ್ತಮ ಮನಸ್ಸು ಹೊಂದಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾವುಕತೆ ಇಲ್ಲದೇ ಜೀವನ ಪೂರ್ಣವಾಗುವುದಿಲ್ಲ. ಮನಸಿನ ಭಾವುಕತೆ ಜ್ಞಾನದ ಕಡೆಗೆ ಒಯ್ಯುತ್ತದೆ. ಭಾವನೆಯೇ ಬದುಕಿನ ಸಾರ ಮತ್ತು ತಿರುಳಾಗಿದೆ ಎಂದರು.

ಮಣ್ಕುಳಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಅಭಯ ಮುದ್ರೆ ಹೊಂದಿರುವ ಮಾರುತಿ ಮೂರ್ತಿಯ ಪ್ರತಿಷ್ಠಾಪನೆಯಿಂದ ಸರ್ವರಿಗೂ ಒಳಿತುಂಟಾಗಲಿದೆ. ಮಾರುತಿ ಮೂರ್ತಿಯ ಪ್ರತಿಷ್ಠಾಪನೆಯ ದಿನದಂದೇ ಮಣ್ಕುಳಿಯಲ್ಲಿ ವಾಸ್ತವ್ಯ ಮಾಡಿದ್ದೇವೆ. ಯಾಜಿಯವರ ಮನೆಯ ಅತಿಥ್ಯ ತೃಪ್ತಿ ತಂದಿದೆ ಎಂದರು.

ಗಜಾನನ ಯಾಜಿ ಅವರು ಸ್ವಾಗತಿಸಿದರು. ಇದಕ್ಕೂ ಪೂರ್ವದಲ್ಲಿ ಶ್ರೀಗಳಿಂದ ಶ್ರೀರಾಮ ಪೂಜೆ ನೆರವೇರಿತು. ಶ್ರೀಗಳು ಆಶೀರ್ವಚನದ ನಂತರದಲ್ಲಿ ಮಂತ್ರಾಕ್ಷತೆ ಕೊಟ್ಟು ಹರಸಿದರು. ಈ ಸಂದರ್ಭದಲ್ಲಿ ಕಿತ್ರೆ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಗಜಾನನ ಯಾಜಿ ಪತ್ನಿ ಗೀತಾ ಯಾಜಿ, ಪ್ರಮುಖರಾದ ಮೋಹನ ಹೆಗಡೆ, ನಾರಾಯಣ ಹೆಬ್ಬಾರ, ಶಿವಾನಂದ ಹೆಬ್ಬಾರ, ಮಂಜುನಾಥ ಹೆಬ್ಬಾರ, ಗಣೇಶ ಹೆಬ್ಬಾರ, ಶಂಭು ಹೆಗಡೆ, ಗಣಪತಿ ಶಿರೂರು, ಎಂ ವಿ ಭಟ್ಟ, ಪರಮೇಶ್ವರ ಭಟ್ಟ ಮುಂತಾದವರಿದ್ದರು.