ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ಜಿಲ್ಲಾ ವರದಿಗಾರರುಸುಂಟಿಕೊಪ್ಪ ಬಹುಭಾಷಿಕರ ನಾಡು... ಇಲ್ಲಿ ಹಲವು ಜಾತಿ, ಧರ್ಮದವರು ನೆಲೆಸಿದ್ದು, ಅನ್ಯೋನ್ಯತೆಯಿಂದ ಬದುಕು ಸಾಗಿಸುತ್ತಿರುವುದರಿಂದ ಭಾವೈಕ್ಯತೆಯ ಬೀಡಾಗಿದೆ.2018ರಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಯಾವುದೇ ಜಾತಿ, ಧರ್ಮ ಲೆಕ್ಕಿಸದೆ ರಾಮ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ಮೂಲಕ ಇಡೀ ರಾಜ್ಯಕ್ಕೆ ಸುಂಟಿಕೊಪ್ಪ ಭಾವೈಕ್ಯತೆಯ ಸಂದೇಶ ಸಾರಿತ್ತು.
ಕನ್ನಡ, ಮಲಯಾಳಂ, ತಮಿಳು, ತುಳು, ಕೊಡವ, ಅರೆ ಭಾಷೆ ಗೌಡ, ಕೊಂಕಣಿ, ಉರ್ದು ಸೇರಿದಂತೆ ಹಲವು ಬಹುಭಾಷಿಕರು ವಾಸಿಸುವ ಪಟ್ಟಣ ಸುಂಟಿಕೊಪ್ಪ. ಪುಟ್ಟ ಪಟ್ಟಣವಾದರೂ ಇದು ಬಹುಭಾಷಿಕರ ನೆಲೆಬೀಡಾಗಿದೆ. ಅಲ್ಲದೆ ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮದವರ ಆರಾಧನ ಕೇಂದ್ರಗಳು ಇಲ್ಲಿವೆ. ಎಲ್ಲರೂ ಪರಸ್ಪರ ಹಬ್ಬ-ಹರಿದಿನಗಳಲ್ಲಿ ಭಾಗವಹಿಸಿ ಶಾಂತಿ ಮತ್ತು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ.ಸುಂಟಿಕೊಪ್ಪ ಪಟ್ಟಣಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಬ್ರಿಟಿಷರ ಕಾಲದಲ್ಲಿ ವಾರದ ಸಂತೆಯನ್ನು ನಡೆಸುತ್ತಿದ್ದ ಸ್ಥಳವಾದರಿಂದ ಇದನ್ನು ಸಂತೆ ಕೊಪ್ಪ ಎಂದು ಕರೆಯುತ್ತಿದ್ದರು ಎನ್ನಲಾಗಿದ್ದು, ಕಾಲ ಕ್ರಮೇಣ ಜನರಿಂದ ಇದು ಸುಂಟಿಕೊಪ್ಪ ಎಂದು ನಾಮಾಂಕಿತಗೊಂಡಿತು. ಇಲ್ಲಿ ಕಾಫಿ, ಕಾಳು ಮೆಣಸು, ಭತ್ತ ಪ್ರಮುಖ ಕೃಷಿಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲೂಕು ಕೇಂದ್ರ ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ಹಾದು ಹೋಗುವ ಮಧ್ಯ ಭಾಗದಲ್ಲಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರ 15 ಕಿ.ಮೀ ಇದೆ. ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಆಗಿದೆ.
ಖ್ಯಾತ ಬೆಳೆಗಾರರು, ಸ್ವಾತಂತ್ರ ಹೋರಾಟಗಾರರು, ರಾಜಕಾರಣಿ ಹಾಗೂ ಕೊಡುಗೈ ದಾನಿಯಾಗಿದ್ದ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಮನೆಯಲ್ಲಿ ಸಾಹಿತಿ ಶಿವರಾಮಕಾರಂತರು ಬೆಟ್ಟದ ಜೀವ ಕಾದಂಬರಿ ಬರೆದಿದ್ದಾರೆ. ಇದಲ್ಲದೆ ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ಸೇರಿದಂತೆ ಹಲವು ಕವಿಗಳು ಮಂಜುನಾಥಯ್ಯ ಅವರ ಮನೆಗೆ ಭೇಟಿ ನೀಡಿರುವುದು ವಿಶೇಷ.
ಬೆಳೆಗಾರ ವಿನೋದ್ ಶಿವಪ್ಪ ಅವರ ಬೆಟ್ಟಗೇರಿ ಎಸ್ಟೇಟ್ ಗೆ ಖ್ಯಾತ ಚಲನಚಿತ್ರ ನಟರಾದ ಸೂಪರ್ ಸ್ಟಾರ್ ರಜಿನಿಕಾಂತ್, ಅಂಬರೀಶ್, ವಿಷ್ಣುವರ್ಧನ್ ಕೂಡ ಬಂದಿದ್ದರು. ಕಾಫಿ ಬೆಳೆಗಾರ ಬೋಸ್ ಮಂದಣ್ಣ ಅವರು ಎರಡು ಬಾರಿ ಭಾರತೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಇವರ ಪತ್ನಿ ಸ್ವಾತಿ ಮಂದಣ್ಣ ಖ್ಯಾತ ಮಹಿಳಾ ವ್ಯಂಗ್ಯ ಚಿತ್ರಕಾರರಾಗಿದ್ದಾರೆ. ಕನ್ನಡ ವೃತ್ತ: ಸುಂಟಿಕೊಪ್ಪದಲ್ಲಿ ಕನ್ನಡ ವೃತ್ತವಿದ್ದು, ವರ್ಷವಿಡೀ ಕನ್ನಡ ಧ್ವಜ ಇಲ್ಲಿ ಹಾರಾಡುತ್ತಿದೆ. ಇದರೊಂದಿಗೆ ವೃತ್ತದಲ್ಲಿ ಕನ್ನಡ ಅಕ್ಷರ ಮಾಲೆ ಅಳವಡಿಸಲಾಗಿದೆ. ಸುಮಾರು 30ಕ್ಕೂ ಅಧಿಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಇದೇ ವೃತ್ತದಲ್ಲಿ ಆಚರಿಸುತ್ತಿರುವುದು ವಿಶೇಷ. ಸಾಹಿತಿಗಳ ನಾಡು!: ಖ್ಯಾತ ಕಥೆಗಾರ್ತಿ ಕೊಡಗಿನ ಗೌರಮ್ಮ ತಮ್ಮ ಪತಿ ಬಿ.ಟಿ. ಗೋಪಾಲಕೃಷ್ಣ ಅವರೊಂದಿಗೆ ಗುಂಡುಕುಟ್ಟಿ ಮಂಜುನಾಥಯ್ಯ ಅವರ ತೋಟದಲ್ಲಿ ನೆಲೆಸಿದ್ದರು. ಇವರು ಸುಮಾರು 21 ಮಹತ್ವದ ಸಣ್ಣ ಕತೆಗಳನ್ನು ಬರೆದಿದ್ದಾರೆ. ಕಥೆಗಾರ ಹಾಗೂ ಸಾಹಿತಿ ಅಬ್ದುಲ್ ರಶೀದ್ ಕೂಡ ಸುಂಟಿಕೊಪ್ಪದವರಾಗಿದ್ದು, 6 ಕಥಾ ಸಂಕಲನ, 2 ಕವನ ಸಂಕಲನ, 2 ಕಾದಂಬರಿ , 5 ಅಂಕಣ ಬರಹ ಬರೆದಿದ್ದಾರೆ. ಈ ಬಾರಿ ಸುಂಟಿಕೊಪ್ಪದಲ್ಲಿ ನಡೆಯಲಿರುವ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕೊಡಗರಹಳ್ಳಿಯ ಬಿ.ಸಿ. ದಿನೇಶ್ ಅವರು ಕೊಡಗಿನ ಸೈನಿಕ ಪರಂಪರೆ ಪುಸ್ತಕ ಪ್ರಕಟಿಸಿದ್ದಾರೆ. ಅರ್ಚಕ ಹ.ಮಾ ಗಣೇಶ್ ಶರ್ಮಾ ಮಕ್ಕಳ ಕಥೆ ಮತ್ತಿತರ ಪುಸ್ತಕ ಪ್ರಕಟಿಸಿದ್ದಾರೆ.ಗಾಂಧಿ ಬಂದಿದ್ದರು!: ಸುಂಟಿಕೊಪ್ಪಕ್ಕೆ ಮಹತ್ಮಾ ಗಾಂಧಿಜೀ ಅವರು ಬಂದಿದ್ದರು. 1934ರಲ್ಲಿ ಹರಿಜನ್ನೋದ್ಧಾರ ಹಾಗೂ ದಲಿತ ಕಲ್ಯಾಣ ನಿಧಿಗಾಗಿ ಸುಂಟಿಕೊಪ್ಪ ಸಮೀಪದ ಗುಂಡುಕುಟ್ಟಿ ಮಂಜುನಾಥಯ್ಯ ಅವರ ಮನೆಯಲ್ಲಿ ತಂಗಿದ್ದರು. ಈ ಸಂದರ್ಭ ಕೊಡಗಿನ ಗೌರಮ್ಮ ತಮ್ಮ ಮನೆಗೂ ಗಾಂಧಿ ಅವರು ಬರಬೇಕೆಂದು ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ವಿಷಯ ತಿಳಿದ ಗಾಂಧಿ ಅವರು ಗೌರಮ್ಮ ಅವರ ಮನೆಗೂ ಭೇಟಿ ನೀಡಿದ್ದರು. ಗಾಂಧಿ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.