ವಿನ್ಸೆಂಟ್ ಎಂ.ಬಿ.
ಕನ್ನಡಪ್ರಭ ಸುಂಟಿಕೊಪ್ಪ ವರದಿಗಾರರುಕೊಡಗು ಜಿಲ್ಲೆ ಹಾಕಿ ಕ್ರೀಡೆಗೆ ಹೆಸೆರುವಾಸಿಯಾದರೆ, ಸುಂಟಿಕೊಪ್ಪ ಫುಟ್ಬಾಲ್ ಕ್ರೀಡೆಯಿಂದ ವಿಶೇಷತೆ ಪಡೆದುಕೊಂಡಿದೆ. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ವಿವಿಧ ಕ್ರೀಡಾ ಸಾಧಕರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿ ಪುಟ್ಟ ಊರಿಗೆ ಕೀರ್ತಿ ತಂದಿದ್ದಾರೆ.
ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಫುಟ್ಬಾಲ್ ಪಂದ್ಯಾವಳಿಯಲ್ಲಿ 11 ಬಾರಿ ರಾಷ್ಟ್ರ ಮಟ್ಟಕ್ಕೆ, 22 ರಾಜ್ಯ ಮಟ್ಟದಲ್ಲಿ ತೆರಳಿರುವುದು ವಿಶೇಷ. ಪ್ರತಿ ವರ್ಷವೂ ಸುಂಟಿಕೊಪ್ಪ ಫುಟ್ಬಾಲ್ ಕ್ರೀಡೆ ಜಾತ್ರೆಯೇ ನಡೆಯುತ್ತದೆ.ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಕ್ರೀಡಾಭಿಮಾನಿಗಳು ಹೆಚ್ಚು. ಪ್ರತಿ ವರ್ಷ ನಡೆಯುವ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆ, ರಾಜ್ಯ ಸೇರಿದಂತೆ ಅಂತರಾಜ್ಯ ಕೇರಳ, ತಮಿಳುನಾಡು, ಕೊಲ್ಕೊತ್ತಾ ಸೇರಿದಂತೆ ವಿವಿಧ ರಾಜ್ಯದ ಹೆಸರುವಾಸಿ ತಂಡಗಳು ಹಾಗೂ ಸೇನಾ ತಂಡಗಳು ಪಾಲ್ಗೊಳ್ಳುತ್ತದೆ. ಈ ಪಂದ್ಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಸೇರುತ್ತಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಶಾಲಾ ಮೈದಾನದಲ್ಲಿ ಜರುಗುವ ಕ್ರೀಡೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕ್ರೀಡಾ ಪ್ರೇಮಿಗಳು ಪಾಲ್ಗೊಂಡು ತಮ್ಮ ನೆಚ್ಚಿನ ತಂಡಗಳಿಗೆ ಪ್ರೋತ್ಸಾಹ ನೀಡುತ್ತ ಹುರುದುಂಬಿಸುವ ಫುಟ್ಬಾಲ್ ಪಂದ್ಯಾಟದ ರಸದೌತಣವನ್ನೇ ಸವಿಯುತ್ತಾರೆ. ಅದರಲ್ಲೂ ಅಂತಾರಾಜ್ಯದ ತಂಡಗಳು ಆಗಮಿಸುವ ಸಂದರ್ಭ ಮತ್ತಷ್ಟು ಕ್ರೀಡಾ ಪ್ರೇಮಿಗಳನ್ನು ಬರಸೆಳೆಯುವಂತೆ ಈ ಕ್ರೀಡೆಗೆ ಕೌಶಲ್ಯತೆಯನ್ನು ಹೊಂದಿದೆ.ಇತ್ತೀಚಿನ ವರ್ಷಗಳಲ್ಲಿ ಹೊಸದೊಂದು ಪ್ರವೃತ್ತಿ ಆರಂಭಗೊಂಡಿದ್ದು, ಹೊನಲು ಬೆಳಕಿನ 5 ಮಂದಿಯ (ಫೈವ್ಸ್) ಕಾಲ್ಚೆಂಡು ಪಂದ್ಯಾವಳಿಯನ್ನು ಆರಂಭಿಸಿದ್ದು ಲಕ್ಷಾಂತರ ರು. ಬಹುಮಾನವನ್ನು ನೀಡುವ ಮೂಲಕ ಕಾಲ್ಚೆಂಡು ತಂಡಗಳನ್ನು ಆಹ್ವಾನಿಸಲಾಗುತ್ತಿದ್ದು, ಇದು ಕೂಡಾ ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಕ್ರೀಡೆಯ ಹೊಸತನಕ್ಕೆ ನಾಂದಿಯಾಡಿದೆ.
ಮೈದಾನದ ಕೊರತೆ
ಇಷ್ಟೆಲ್ಲ ಕ್ರೀಡಾಸಕ್ತಿ ಹೊಂದಿರುವ ಸುಂಟಿಕೊಪ್ಪದಲ್ಲಿ ಸರಿಯಾದ ಮೈದಾನದ ಕೊರತೆ ಕಾಡುತ್ತಿದೆ. ಹಲವು ಕ್ರೀಡಾ ಪ್ರತಿಭೆಗಳು ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯಗುತ್ತಿಲ್ಲ. ಇಲ್ಲಿ ಉತ್ತಮವಾದ ಒಂದು ಕ್ರೀಡಾಂಗಣದ ವ್ಯವಸ್ಥೆಯಾಗಬೇಕಿದೆ. ಆದರೆ ಸಾಕಷ್ಟು ಬಾರಿ ಸರ್ಕಾರಕ್ಕೆ ಸಂಬಂಧಿಸಿದವರು ಗಮನ ಸೆಳೆದಿದ್ದರೂ ಇಂದಿಗೂ ಕ್ರೀಡಾ ಮೈದಾನದ ಕಾಯಕಲ್ಪ ದೊರಕದೆ ಇರುವುದು ವಿಷಾದನೀಯ. ಸರ್ಕಾರಿ ಜಾಗದ ಕೊರತೆ ಹಿನ್ನಲೆಯಲ್ಲಿ ಈ ಭಾಗದ ಕ್ರೀಡಾ ಕ್ಷೇತ್ರದ ಬಹುದಿನದ ಬೇಡಿಕೆಯೂ ಗಗನ ಕುಸುಮವಾಗಿಯೇ ಉಳಿದುಕೊಂಡಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾ ತಾರೆಯರು!
ಕ್ರೀಡಾ ಕ್ಷೇತ್ರದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಹಲವು ಮಂದಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ನಾಕೂರಿನ ರಾಬಿನ್ ಉತ್ತಪ್ಪ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಟೆನ್ನಿಸ್ ನಲ್ಲಿ ರೋಹನ್ ಬೋಪಣ್ಣ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಂದಗೋವೆಯ ಎಂ.ಪಿ. ಗಣೇಶ್ ಹಾಕಿ ವಿಶ್ವಕಪ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಕಂಬಿಬಾಣೆಯ ಅಂಕಿತ ಸುರೇಶ್ ಅವರು ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಒಲಿಂಪಿಕ್ಸ್ ನಲ್ಲೂ ತರಬೇತುದಾರರಾಗಿದ್ದರು. ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ನವನೀತ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.