ಬ್ಯಾಡಗಿ: ತಾಲೂಕಿನಲ್ಲಿ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೂ ಮಳೆಯಾಧಾರಿತ ಬಿತ್ತನೆಗೆ ಇನ್ನೂ ಭೂಮಿ ಸಿದ್ಧವಾಗಿಲ್ಲ. ಹೀಗಾಗಿ ಸೋಯಾಬಿನ್ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಗೆ ರೈತರು ಆತುರಪಡಬಾರದು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಹೇಳಿದ್ದಾರೆ.
ತಾಲೂಕಿನಲ್ಲಿ ಮೇ ತಿಂಗಳಿನಲ್ಲಿ 56.9 ಮಿ.ಮೀ. ವಾಡಿಕೆ ಮಳೆಯಾಗಿದೆ. ಆದರೆ ಇದುವರೆಗೆ 117.7 ಮಿ.ಮೀ. ಮಳೆಯಾಗಿದೆ. ಆದಾಗ್ಯೂ ಮುಂಗಾರು ಇನ್ನೂ ಸಂಪೂರ್ಣ ಸ್ಥಿರವಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮಳೆಯಾಧಾರಿತ ಬಿತ್ತನೆಗೆ ಮುಂದಾಗಬಾರದು ಎಂದು ಮನವಿ ಮಾಡಿದರು.1 ಅಡಿಗಿಂತ ಜಾಸ್ತಿ ತೇವಾಂಶವಿಲ್ಲ: ಮುಂಗಾರು ಸಮಯದಲ್ಲಿ ಕನಿಷ್ಠ 1 ಅಡಿಗಳಷ್ಟು ಒಳಗೆ ಭೂಮಿ ತೇವಾಂಶ ಹೊಂದಿದ್ದರೆ ಬಿತ್ತನೆಗೆ ಉತ್ತಮ. ಮಣ್ಣಿನಲ್ಲಿ ಸಮರ್ಪಕ ತೇವಾಂಶ ಲಭ್ಯವಾದ ಬಳಿಕವೇ ಬಿತ್ತನೆ ಮಾಡುವುದು ಸೂಕ್ತ. ಅಲ್ಲಿಯವರೆಗೂ ರೈತರು ಕೃಷಿಭೂಮಿ ಬಿತ್ತನೆಗೆ ಸಜ್ಜುಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ತಜ್ಞರ ಸಲಹೆ ಅನುಸರಿಸಿ: ಸೋಯಾಬೀನ್ ಬೆಳೆಗೆ ಮಣ್ಣಿನಲ್ಲಿ ಕನಿಷ್ಠ 3ರಿಂದ 5 ಸೆಂ.ಮೀ. ಆಳದ ವರೆಗೆ ಸಮರ್ಪಕ ತೇವಾಂಶ ಹಾಗೂ ತಂಪಾದ ವಾತಾವರಣ ಅಗತ್ಯವಾಗಿದ್ದು, ಸುಮಾರು 50ರಿಂದ 75 ಮಿ.ಮೀ. ಪರಿಣಾಮಕಾರಿ ಮಳೆಯಾದ ಬಳಿಕ ಬಿತ್ತನೆ ಕೈಗೊಳ್ಳುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಅನುಸರಿಸುವಂತೆ ಕೋರಿದ್ದಾರೆ.ಎರಡರಷ್ಟು ಬೀಜ ವಿತರಣೆ: ಕಳೆದ ವರ್ಷ ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ 240 ಕ್ವಿಂಟಲ್ ಸೋಯಾಬೀನ್ ಬೀಜ ವಿತರಣೆಗೊಂಡು ಸುಮಾರು 101 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿತ್ತು, ಈ ಬಾರಿ 480 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಸೋಯಾಬೀನ್ ಬೆಳೆ ವಿಸ್ತಾರವಾಗುವ ಸಾಧ್ಯತೆ ಇದೆ ಎಂದರು.
ಸಂಯುಕ್ತ ರಸಗೊಬ್ಬರ ಬಳಕೆ ಮಾಡಿ: ಪ್ರಸ್ತುತ ತಾಲೂಕಿನಲ್ಲಿ ಚದುರಿದ ಮಳೆ ಹಾಗೂ ಗುಡುಗು-ಮಿಂಚಿನ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ರೈತರು ಹವಾಮಾನ ಸ್ಥಿತಿಗತಿಗಳನ್ನು ಗಮನಿಸಿ ಬಿತ್ತನೆ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ, ಇದೇ ವೇಳೆ ರೈತರು ರಸಗೊಬ್ಬರ ಖರೀದಿಸುವಾಗ ಒಂದೇ ಕಂಪನಿ ಅಥವಾ ಒಂದೇ ರಸ ಗೊಬ್ಬರಕ್ಕೆ ಆದ್ಯತೆ ನೀಡದೇ, ಡಿಎಪಿಗೆ ಪರ್ಯಾಯವಾಗಿ ಗಂಧಕ ಹಾಗೂ ಪೋಟ್ಯಾಸಿಯಂ ಒದಗಿಸುವ ಇತರ ಸಂಯುಕ್ತ ರಸಗೊಬ್ಬರಗಳನ್ನು ಬಳಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.