ತಾಲೂಕಿನ ಹೂಲಸೂರು ಹಾಗೂ ಕಳಗಾಪುರ ಗ್ರಾಮಗಳಲ್ಲಿ ಕಮಲನಗರ ಪೊಲೀಸ್ ಠಾಣೆಯಿಂದ ಇತ್ತೀಚೆಗೆ ಹಗಲು ಗಸ್ತು ಹಾಗೂ ರಾತ್ರಿ ವಾಸ್ತವ್ಯ ಕರ್ತವ್ಯದ ಅಂಗವಾಗಿ ವಿವಿಧ ಜಾಗೃತಿ ಮತ್ತು ಜನಸಂಪರ್ಕ ಸಭೆಗಳನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕಿನ ಹೂಲಸೂರು ಹಾಗೂ ಕಳಗಾಪುರ ಗ್ರಾಮಗಳಲ್ಲಿ ಕಮಲನಗರ ಪೊಲೀಸ್ ಠಾಣೆಯಿಂದ ಇತ್ತೀಚೆಗೆ ಹಗಲು ಗಸ್ತು ಹಾಗೂ ರಾತ್ರಿ ವಾಸ್ತವ್ಯ ಕರ್ತವ್ಯದ ಅಂಗವಾಗಿ ವಿವಿಧ ಜಾಗೃತಿ ಮತ್ತು ಜನಸಂಪರ್ಕ ಸಭೆಗಳನ್ನು ನಡೆಸಲಾಯಿತು.ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಪೊಲೀಸ್ ಸಿಬ್ಬಂದಿ, ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರದ ಅಗತ್ಯತೆಯನ್ನು ವಿವರಿಸಿದರು. ಸೈಬರ್ ಅಪರಾಧ, ಆನ್‌ಲೈನ್ ಹಣದ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುವ ಮೋಸಗಳ ಕುರಿತು ಎಚ್ಚರಿಕೆ ನೀಡಿದರು. ಅಪರಿಚಿತ ಕರೆ, ಸಂದೇಶ ಅಥವಾ ಲಿಂಕ್‌ಗಳಿಗೆ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡದಂತೆ ಸಲಹೆ ನೀಡಿದರು.
ದಲಿತರ ಓಣಿಗಳಿಗೆ ಭೇಟಿ ನೀಡಿದ ಪೊಲೀಸರು, ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಸಂವಿಧಾನಬದ್ಧ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆ ಮತ್ತು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ತಿಳಿಸಿ, ಪೋಕ್ಸೊ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಪಾಲಕರು ಹೆಚ್ಚಿನ ಜವಾಬ್ದಾರಿ ವಹಿಸುವಂತೆ ಮನವರಿಕೆ ಮಾಡಿದರು. ಬಾಲ್ಯ ವಿವಾಹದಿಂದ ಉಂಟಾಗುವ ಕಾನೂನು ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಿದರು. ಶಾಲೆಗಳಿಗೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ 1098 ಮಕ್ಕಳ ಸಹಾಯವಾಣಿ ಹಾಗೂ ತುರ್ತು ಸಂದರ್ಭದಲ್ಲಿ 112ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮನೆ, ಅಂಗಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕೊಳ್ಳುವಂತೆ ಪೊಲೀಸ್ ಸಿಬ್ಬಂದಿ ಸಲಹೆ ನೀಡಿದರು.
ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹಾಗೂ ಶೇಖರ್ ಅವರ ನೇತೃತ್ವದಲ್ಲಿ, ಸಿಪಿಐ ಶ್ರೀಕಾಂತ ಅಲ್ಲಾಪೂರೆ ಹಾಗೂ ಪಿಎಸ್‌ಐ ಆಶಾ ರಾಠೋಡ ಅವರ ಮಾರ್ಗದರ್ಶನದಲ್ಲಿ ಸಭೆಗಳು ಜರುಗಿದವು. ಜನರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಾಯಿತು.