ಸುರಪುರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ರಾಜೂಗೌಡ

| Published : Apr 13 2024, 01:05 AM IST

ಸಾರಾಂಶ

ಹುಣಸಗಿ ತಾಂಡಾದಲ್ಲಿ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಮಾಜಿ ಸಚಿವ ರಾಜೂಗೌಡರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಅಧಿಕಾರದಲ್ಲಿರುವಾಗ ಸುರಪುರ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದರು.

ಪಟ್ಟಣದ ಹುಣಸಗಿ ತಾಂಡಾದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ನಾನು ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದರೆ ಸುರಪುರ ಮತಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಈ ಹಿಂದೆ ನಾನು ಶಾಸಕನಾಗಿರುವ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ರಾಜ್ಯದಲ್ಲಿಯೇ ಅತೀ ಹೆಚ್ಚು ಅನುದಾನವನ್ನು ಸುರಪುರ ಮತಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.

ಗ್ರಾಮ ಹಾಗೂ ಪಟ್ಟಣಗಳ ಅಭಿವೃದ್ಧಿ ಜತೆಗೆ ಪ್ರತಿಯೊಂದು ಸಮುದಾಯಕ್ಕೆ ನ್ಯಾಯ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವುದರ ಜೊತೆಗೆ ಅವರವರ ಸಮುದಾಯದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಾಲಾ-ಕಾಲೇಜು ಮಂಜೂರು ಹಾಗೂ ಕಟ್ಟಡ ನಿರ್ಮಾಣ, ಆಸ್ಪತ್ರೆಗಳ ಮೇಲ್ದರ್ಜೆಗೆ ಏರಿಸುವುದು, ಕ್ಷೇತ್ರದಲ್ಲಿ 33 ಹಾಗೂ 110 ಕೆವಿಎ ಸ್ಟೇಷನ್ ಮಂಜೂರು ಮಾಡಿಸುವುದು ಸೇರಿದಂತೆ ಇನ್ನು ಅನೇಕ ಜನಪರ ಕೆಲಸವನ್ನು ಮಾಡಿದ್ದೇನೆ ಎಂದರು.

ಕೋವಿಡ್ ವೇಳೆ ಕ್ಷೇತ್ರದ ಜನರು ಮಹಾರಾಷ್ಟ್ರದಲ್ಲಿ ಸಿಲುಕಿರುವಾಗ ಅವರನ್ನು ರಕ್ಷಿಸುವ ಕೆಲಸ ಮಾಡಿ ಅವರನ್ನು ಸ್ವಗ್ರಾಮಕ್ಕೆ ಕರೆತರುವ ಕೆಲಸವು ಸಹ ಮಾಡಿದ್ದೇನೆ ಎಂದರು.

ಪ್ರಸ್ತುತ ಸುರಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತು, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷಕ್ಕೆ ಮತ್ತಷ್ಟು ಆನೆಬಲ ಬಂದಂತಾಗಿದೆ. ವಿಧಾನಸಭೆ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ವೇಳೆ ಹಲವರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ, ಬಿಜೆಪಿ ಮುಖಂಡ ವಿರೇಶ ಸಾಹು ಚಿಂಚೋಳಿ, ಬಸವನಗೌಡ ಯಡಿಯಾಪೂರ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ವಿರೂಪಾಕ್ಷಯ್ಯ ಸ್ಥಾವರಮಠ, ಎಂ.ಎಸ್. ಚಂದಾ, ಬಸಲಿಂಗಪ್ಪ ಸಜ್ಜನ್, ರಾಜು ಮಲಗಲದಿನ್ನಿ, ಬಸಣ್ಣ ಬಾಲಗೌಡ್ರ, ಮಲ್ಲು ಹೆಬ್ಬಾಳ, ಹಳ್ಳೆಪ್ಪ ಗುತ್ತೇದಾರ ಸೇರಿದಂತೆ ಇತರರಿದ್ದರು.