ಸಾರಾಂಶ
ಮುಂಡರಗಿ: ನಮಗೆ ಅಧಿಕಾರ ನಡೆಸಲು ಅತ್ಯಂತ ಕಡಿಮೆ ಅವಧಿ ದೊರೆತಿದ್ದು, ನಮಗಿರುವ ಅವಧಿಯಲ್ಲಿಯೇ ಹೆಚ್ಚಿನ ಶ್ರಮ ವಹಿಸುವ ಮೂಲಕ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಪುರಸಭೆ ನೂತನ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.
ಅವರು ಗುರವಾರ ಸಂಜೆ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗುತ್ತಿರುವ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮುಂಡರಗಿ ಪಟ್ಟಣವು ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಪ್ರತಿ ವಾರ್ಡ್‌ನಲ್ಲಿರುವ ವಿವಿಧ ರಸ್ತೆಗಳಿಗೆ ನಾಮಫಲಕ ಹಾಕಲಾಗುವುದು. ಪಟ್ಟಣದಲ್ಲಿ ಅತೀ ಅವಶ್ಯವಿರುವ ಕಾಮಗಾರಿ ಕೈಗೆತ್ತಿಕೊಂಡು ಸಂಪೂರ್ಣ ಗೊಳಿಸಲಾಗುವುದು. ಸಾರ್ವಜನಿಕ ಶೌಚಾಲಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಪಟ್ಟಣದಲ್ಲಿದ್ದ ಉದ್ಯಾನವನ ವ್ಯವಸ್ಥಿತವಾಗಿ ಮಾಡಿ ಅವುಗಳ ನಿರ್ವಹಣೆಯ ಜವಾಬ್ದಾರಿ ಪುರಸಭೆಗೆ ವಹಿಸಲಾಗುವುದು. ಗದಗ ರಸ್ತೆಗೆ ಹೊಂದಿಕೊಂಡಿರುವ ಅನ್ನದಾನೀಶ್ವರ ರುದ್ರಭೂಮಿಯನ್ನು ಪರಿಸರ ಸ್ನೇಹಿಯಾಗಿ ಮಾಡಲಾಗುವುದು ಎಂದರು.
ಇದೇ ವೇಳೆ ಪುರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ಕೊರ್ಲಹಳ್ಳಿಗೆ ಸನ್ಮಾನಿಸಿ ಆಶೀರ್ವದಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರೊ. ಸಿ.ಎಸ್.ಅರಸನಾಳ ಉಪನ್ಯಾಸ ನೀಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಜ್ಞಾನ, ಪರಿಸರ ಶಿಕ್ಷಣ ಮತ್ತು ಪರಿಸರ ಪ್ರಜ್ಞೆ ಎಲ್ಲರಲ್ಲಿ ಮೂಡಿ ಬರಬೇಕು. ಸಸಿ ನೆಡುವುದು ಇವತ್ತಿನ ಸಂದರ್ಭದಲ್ಲಿ ಪ್ಯಾಶನ್ ಆಗಿದೆ. ಪ್ರತಿ ವರ್ಷ ಅದೇ ತಗ್ಗಿನಲ್ಲಿ ಸಸಿ ನೆಟ್ಟು ಪ್ರಚಾರ ಮಾಡಿಕೊಳ್ಳುವ ಪರಿಸರ ದಿನಾಚರಣೆ ಸೋಕಿ ಹೋಗಬೇಕು. ಸಸಿ ನೆಡುವುದಕ್ಕಿಂತ ಅವುಗಳನ್ನು ಉಳಿಸಿ ಬೆಳೆಸುವುದು ಮುಖ್ಯ.ನಾವು ಅರಣ್ಯ ಉಳಿಸಿ ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆ ಸ್ವಚ್ಛಂದವಾದ ಪರಿಸರದಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದರು.ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ಪುರಸಭೆಗೆ ಶ್ರೀಮಠದಿಂದ ಭೂ ದಾನ ಮಾಡಲಾಗಿದೆ. ಅದಕ್ಕೆ ಅನ್ನದಾನೀಶ್ವರರ ಹೆಸರಿಟ್ಟು ಕೃತಜ್ಞತೆ ಸಲ್ಲಿಸಿ ಎಂದರು.
ನಾಗಭೂಷಣ ಸ್ವಾಮೀಜಿ ಸೊರಟೂರ ಅಜ್ಜನವರ ಜೀವನ ಚರಿತ್ರೆ ಕುರಿತು ಪ್ರವಚನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಮಂಜುನಾಥ ಮುಧೋಳ, ನಾಗರಾಜ ಕೊರ್ಲಹಳ್ಳಿ, ಮಂಜುನಾಥ ಶಿವಶಟ್ಟರ್, ವಿರೇಶ ಸಜ್ಜನರ, ಕುಮಾರ ಬನ್ನಿಕೊಪ್ಪ, ಪ್ರದೀಪ ಗುಡದಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಆರ್. ರಿತ್ತಿ ನಿರೂಪಿಸಿ, ವಂದಿಸಿದರು.