ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಿ: ಶಾಸಕ ಟಿ.ರಘುಮೂರ್ತಿ

| Published : Jan 09 2024, 02:00 AM IST

ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಿ: ಶಾಸಕ ಟಿ.ರಘುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ, ಕ್ರೀಡೆ ಮತ್ತು ಸಾಂಸ್ಕೃತಿಕ, ರೋರ್ಸ್‌ ಅಂಡ್ ರೇರ್ಸ್‌ ಘಟಕಗಳ ಸಮಾರೋಪ ಸಮಾರಂಭವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ, ಕ್ರೀಡೆ, ಸಾಂಸ್ಕೃತಿಕ, ರೋರ್ಸ್‌ ಅಂಡ್ ರೇರ್ಸ್‌ ಘಟಕಗಳ ಕಾರ್ಯನಿರ್ವಹಣೆಯಲ್ಲಿ ಮೇಲುಗೈ ಸಾಧಿಸಿದೆ. ವಿಶೇಷವಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದೆ. ಶೈಕ್ಷಣಿಕ ದೃಷ್ಠಿಯಿಂದ ಕಾಲೇಜಿನಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಸೋಮವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ, ಕ್ರೀಡೆ ಮತ್ತು ಸಾಂಸ್ಕೃತಿಕ, ರೋರ್ಸ್‌ ಅಂಡ್ ರೇರ್ಸ್‌ ಘಟಕಗಳ ಸಮಾರೋಪ ಸಮಾರಂಭವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕಾಲೇಜಿನ ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶೈಕ್ಷಣಿಕ ಪ್ರಗತಿ ಹೊಂದುವ ಅಭಿಲಾಷೆ ಎಲ್ಲಾ ವಿದ್ಯಾರ್ಥಿಗಳದ್ದು, ಕಾಲೇಜಿನ ಬೋಧಕ ವರ್ಗ ಹಾಗೂ ಪ್ರಾಚಾರ್ಯರು ಇತರೆ ಚಟುವಟಿಕೆಗಳಿಗೆ ಹೆಚ್ಚು ಮುತುವರ್ಜಿ ವಹಿಸುವಂತೆ ಫಲಿತಾಂಶ ಹೆಚ್ಚಿಸುವಲ್ಲಿ ಗಮನ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ, ಎನ್‌ಎಸ್‌ಎಸ್ ಯೋಜನೆ ಅನುಷ್ಠಾನದಲ್ಲಿ ರಾಜ್ಯಪ್ರಶಸ್ತಿ ಪಡೆದ ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿದರು.

ಜಗಲೂರಿನ ನಿವೃತ್ತ ಉಪನ್ಯಾಸಕ ಡಿ.ಸಿ.ಮಲ್ಲಿಕಾರ್ಜುನ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿ, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಶ್ವವಿದ್ಯಾಲಯ ಮಟ್ಟದಲ್ಲಿ ಬೆಳವಣಿಗೆಯಾಗಬೇಕು ಎಂಬ ಹಂಬಲ ಎಲ್ಲರದ್ದು. ಹಲವಾರು ಕಾರ್ಯಚಟುವಟಿಕೆಗಳಲ್ಲಿ ಮೈಲಿಗಲ್ಲು ಸಾಧಿಸಿದರೂ ಶೈಕ್ಷಣಿಕವಾಗಿಯೂ ಕಾಲೇಜು ಇನ್ನೂ ಹೆಚ್ಚಿನ ಫಲಿತಾಂಶ ದಾಖಲಿಸಬೇಕಿದೆ. ವಿದ್ಯಾರ್ಥಿಗಳು ಉಪನ್ಯಾಸಕರು, ಪ್ರಾಧ್ಯಾಪಕರು, ನೀಡುವ ಶಿಕ್ಷಣ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಅದು ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗುವ ಸಂಭವವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತಾವು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಹೆಚ್ಚು ಪರಿಶ್ರಮ ಹೊಂದಬೇಕಾಗುತ್ತದೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಪ್ರಗತಿಯತ್ತ ಹೆಜ್ಜೆ ಇಡಲು ಎಲ್ಲಾ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ರವೀಶ್ ಮಾತನಾಡಿ, ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಶಾಸಕರಾದ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಪಡೆದು ಉತ್ತಮ ಕೆಲಸ ಮಾಡಲಾಗುತ್ತಿದೆ. ಹಲವಾರು ವಿಷಯದಲ್ಲಿ ನಾವು ಪ್ರಗತಿಯಲ್ಲಿದ್ದರೂ ವೈಯಕ್ತಿಕವಾಗಿ ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈ ಭಾರಿ ಎಲ್ಲರ ಸಹಕಾರದಿಂದ ಫಲಿತಾಂಶ ಉತ್ತಮ ಪಡಿಸಲು ಎಲ್ಲಾ ಆಯಾಮಗಳಲ್ಲಿ ಕಾರ್ಯನಿರ್ವಹಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಶ್ವತ ದತ್ತಿನಿಧಿ ದಾನಿಗಳಾದ ಶಶಿಕಲಾ ಸುರೇಶ್‌ ಬಾಬು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಟಿ.ರುದ್ರಮುನಿ, ಗುರುನಾಥಗುಪ್ತ, ಕೋಣಪ್ಪ, ಉಪನ್ಯಾಸಕರಾದ ಕೆ.ಚಂದ್ರಶೇಖರ್, ನಾಗರಾಜ ಬೆಳಗಟ್ಟ, ಜಬೀವುಲ್ಲಾ, ಲಲಿತಮ್ಮ, ಹಬೀಬುಲ್ಲಾ, ಮಾಜಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು.