ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಹಲವಾರು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಈ ವಿಚಾರವಾಗಿ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಹಲವಾರು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಈ ವಿಚಾರವಾಗಿ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ತಿಳಿಸಿದರು.

ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಗಣರಾಜ್ಯೋತ್ಸವ ಸಮಾರಂಭದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರನಪಾದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಕ್ಯಾಬಿನೆಟ್‌ ಸಭೆಯಲ್ಲಿ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಲಾಗುವುದು ಎಂದರು.

ಜಿಲ್ಲೆಯ 23 ಕೆರೆಗಳನ್ನು ತುಂಬಿಸುವ ಏತ ಯೋಜನೆ ಪೈಪ್ ಒಡೆದು ಹೋಗುತ್ತಿದ್ದು, ಈಗಿರುವ ಪೈಪ್‌ ಲೈನ್‌ ಬದಲಿಗೆ ಹೊಸದಾಗಿ ಕ್ಯಾಸ್ಟ್ ಐರನ್ ಪೈಪ್‌ಗಳನ್ನು ಅಳವಡಿಸಲು ಟೆಂಡರ್ ಕರೆಯುತ್ತೇವೆ. ಮುಂದಿನ ದಿನಗಳಲ್ಲಿ ದಾವಣಗೆರೆ ತಾಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ. ಶೀಘ್ರವೇ ಸಿಎಂ ಭೇಟಿ ಮಾಡಿ, ನಮ್ಮ ಜಿಲ್ಲೆಯ ಪ್ರಸ್ತಾವನೆಗಳನ್ನು ಪರಿಗಣಿಸಲು ಮನವಿ ಮಾಡುವೆ ಎಂದು ಹೇಳಿದರು.

ಭದ್ರಾ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರೊದಗಿಸುವ ಕೆಲಸ ಮಾಡುತ್ತಿದ್ದೇವೆ. ನೀರಾವರಿಗೆ ನಮ್ಮ ಆದ್ಯತೆ. ಹೊಸ ಪ್ರಸ್ತಾವನೆ ಮಾಡುತ್ತಿದ್ದೇವೆ, ಹೊಸ ಯೋಜನೆ, ಕಾರ್ಯಕ್ರಮಗಳನ್ನು ಜಿಲ್ಲೆಗಾಗಿ ರೂಪಿಸುತ್ತಿದ್ದೇವೆ. ನೀರಾವರಿ ಯೋಜನೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಒತ್ತು ನೀಡಿದ್ದೇವೆ. ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಲು ರೈತರಿಗೆ ಸಬ್ಸಿಡಿ ನೀಡುವ ಯೋಜನೆಗಳನ್ನೂ ಜಿಲ್ಲೆಗೆ ನೀಡಲಿದ್ದೇವೆ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ 33 ಕೋಟಿ ರು. ಅನುದಾನ ಮಂಜೂರಾಗಿದೆ. ಪರೀಕ್ಷಾಂಗ ವಿಭಾಗದ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಹರಿಹರ ತಾ. ಬೆಳ್ಳೂಡಿ ಸಮೀಪದ ಕಾರ್ಗಿಲ್ ಮೆಕ್ಕೆಜೋಳ ಸಂಸ್ಕರಣ ಘಟಕವನ್ನು ಸಿದ್ಧಿ ಸಿರಿ ಸಂಸ್ಥೆ ವಹಿಸಿಕೊಂಡಿದ್ದಾರೆಂಬ ಮಾಹಿತಿ ಇದೆ. ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಹಣ್ಣುಗಳ ಸಂರಕ್ಷಣೆಗಾಗಿ ರೈಪಿಂಗ್ ಚೇಂಬರ್, ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಕಲ್ಪಿಸಲು ಗಮನ ಹರಿಸುತ್ತೇವೆ ಎಂದು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಓ ಗಿತ್ತೆ ಮಾಧರ ವಿಠ್ಠಲರಾವ್‌, ಪಾಲಿಕೆ ಆಯುಕ್ತೆ ರೇಣುಕಾ, ಮಾಜಿ ಮೇಯರ್ ಕೆ.ಚಮನ್ ಸಾಬ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಪಾಲಿಕೆ ಮಾಜಿ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಬೂದಾಳ ಬಾಬು ಇತರರು ಇದ್ದರು.