ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ಪ್ರತಿಯೊಂದು ಗ್ರಾಮಗಳ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದು ಹಂತ ಹಂತವಾಗಿ ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡ ವಲ್ಲಬಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಕಳೆದ ಎರಡು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರದಿಂದ ನೂರಾರು ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ ಎಂದರು.
ಸರ್ಕಾರದಿಂದ ಬಂಪರ್ ಕೊಡುಗೆ:ಹಲವು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿವೆ ಇನ್ನು ಕೆಲವು ಕಾಮಗಾರಿಗಳು ಶೇ.೫೦ರಷ್ಟು ಪೂರ್ಣಗೊಂಡಿವೆ. ಕಾಂಗ್ರೆಸ್ ಸರ್ಕಾರಕ್ಕೆ ಇರುವ ಮೂರು ವರ್ಷದ ಅವಧಿಯಲ್ಲಿ ಕೋಲಾರ ವಿಧಾಸಭಾ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗುವುದು, ಕೋಲಾರ ಜಿಲ್ಲೆಯ ಜನತೆಯ ಆಸೆಯಂತೆ ಕೋಲಾರಕ್ಕೆ ರಾಜ್ಯ ಸರ್ಕಾರ ಬಂಪರ್ ಕೊಡುಗೆಗಳನ್ನು ನೀಡಿದೆ ಎಂದರು.
ಪ್ರಮುಖವಾಗಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ, ದೇಶ, ವಿದೇಶಿ ಕಂಪನಿಗಳ ಮಾಲೀಕರು ಜಿಲ್ಲೆಗೆ ಬಂದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದಾಗುತ್ತಿರುವುದು ಸ್ವಾಗತಾರ್ಹ. ಇದರ ಬೆನ್ನಲ್ಲೇ ತಾಲೂಕಿನ ವೇಮಗಲ್ ಕೈಗಾರಿಕೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಟಕ ಸ್ಥಾಪನೆ ಮಾಡಲು ಮುಂದಾಗಿದೆ. ಇದರಿಂದ, ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ನಿರೀಕ್ಷೆ ಹೆಚ್ಚಿದೆ ಎಂದರು.ಸ್ಥಳ ನೀಡಿದ ದಾನಿಗೆ ಸನ್ಮಾನ:
ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯ ರಾಜಕಲ್ಲಹಳ್ಳಿಯಲ್ಲಿ ನೂತನವಾಗಿ ಪಶು ವೈದ್ಯಕೀಯ ಆಸ್ಪತ್ರೆ ಶಂಕು ಸ್ಥಾಪನೆ ನೆರವೇರಿಸಿದರಲ್ಲದೆ ಪಶು ಆಸ್ಪತ್ರೆ ನಿರ್ಮಿಸಲು ಸ್ಥಳ ನೀಡಿದ ದಾನಿಗಳನ್ನು ಶಾಸಕ ಕೊತ್ತೂರು ಮಂಜುನಾಥ್ ಸನ್ಮಾನಿಸಿ ಅಭಿನಂದಿಸಿದರು.ಶ್ರೀನಿವಾಸಪುರ ಮುಖ್ಯ ರಸ್ತೆಯಿಂದ ಅಂಬೇಡ್ಕರ್ ನಗರ ಬಾರಂಡಡಳ್ಳಿ ಹೂದಲವಾಡಿ ಮಣಿಘಟ್ಟ ರಸ್ತೆ ಡಾಂಬರೀಕರಣ ಕಾಮಗಾರಿ ೧೭೫ ಲಕ್ಷ, ಮಾಲೂರು ಮುಖ್ಯ ರಸ್ತೆಯಿಂದ, ವಿಜಯನಗರ ಪವನ್ ಕಾಲೇಜ್ ಸರ್ವಿಸ್ ರಸ್ತೆ ಡಾಂಬರೀಕರಣ ಕಾಮಗಾರಿ ೧೭೫ ಲಕ್ಷ, ಕೋಲಾರ ತಾಲೂಕು ಮುದುವತ್ತಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ೪೦ ಲಕ್ಷ, ಕೋಲಾರ ತಾಲೂಕು ವಕ್ಕಲೇರಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ರಸ್ತೆ ಡಾಂಬರೀಕರಣಕ್ಕೆ ₹೪೯೫ ಲಕ್ಷ:ಮೈಲಾಂಡಳ್ಳಿಯಿಂದ ಬಣಕನಹಳ್ಳಿ ಕೂತಾಂಡಹಳ್ಳಿಯಿಂದ ಅಲಹಳ್ಳಿ ಮೂಲಕ ಮಾಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಹಾಗೂ ಸಿ.ಸಿ ರಸ್ತೆ ಕಾಮಗಾರಿ ೪೯೫ ಲಕ್ಷ, ಕೋಲಾರ ತಾಲೂಕು ಸೂಲೂರು ಗ್ರಾಪಂ ಕಟ್ಟಡ ಮೊದಲನೇ ಮಹಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಕೋಲಾರ ತಾಲೂಕು ರಾಜಕಲ್ಲಳ್ಳಿ ಪಶು ವೈದ್ಯಕೀಯ ಆಸ್ಪತ್ರೆ ಭೂಮಿ ಪೂಜೆ ೪೯.೯೫ ಲಕ್ಷ. ಗುದ್ದಲಿ ಪೂಜೆ ಶಾಸಕ ಕೊತ್ತೂರು ಜಿ.ಮಂಜುನಾಥ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಂಎಲ್.ಸಿ ಅನಿಲ್ ಕುಮಾರ್, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಮುಖಂಡರಾದ ಚಂಜಿಮಲೆ ರಮೇಶ್, ನಾಗಲಾಪುರ ವೀರೇಂದ್ರ ಪಾಟೀಲ್ ಇದ್ದರು.