ಸಾರಾಂಶ
ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ‘ಭಾರತದ ಕಡಲಾಳದ ಮೆಸೊಪೆಲಾಜಿಕ್ ಮೀನುಗಳ ಸುಸ್ಥಿರ ಕೊಯ್ಲು ಮತ್ತು ಬಳಕೆಯ ಸಾಧ್ಯತೆಗಳ ಅನ್ವೇಷಣೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು.
ಮಂಗಳೂರು : ಸಮುದ್ರ ಮಟ್ಟದಿಂದ 200ರಿಂದ 1000 ಮೀಟರ್ ಕೆಳ ಭಾಗದ ಮೆಸೊಪೆಲಾಜಿಕ್ ವಲಯದಲ್ಲಿರುವ ಆಹಾರವಾಗಿ ಉಪಯೋಗಿಸಲಾಗದ ಮೀನುಗಳನ್ನು ಔಷಧೀಯ ಅಥವಾ ಸೌಂದರ್ಯ ವರ್ಧಕಗಳಲ್ಲಿ ಬಳಕೆ ಮಾಡುವ ಮೂಲಕ ಆರ್ಥಿಕತೆಗೆ ಒತ್ತು ನೀಡಬಹುದಾಗಿದೆ. ಸಮುದ್ರದಲ್ಲಿ ಸುಸ್ಥಿರ ಮೀನುಗಾರಿಕೆಯನ್ನು ಕಾಯ್ದುಕೊಳ್ಳುವುದರೊಂದಿಗೆ ಈ ಮೀನುಗಳ ಸಂಗ್ರಹಕ್ಕೆ ಸೂಕ್ತ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ಸಮಗ್ರ ಸಂಶೋಧನೆಯಿಂದ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಬೇಕು ಎಂದು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷೆ ಮತ್ತು ಐಸಿಎಆರ್‌ನ ಮಾಜಿ ಉಪನಿರ್ದೇಶಕಿ ಮೀನಾ ಕುಮಾರಿ ಅಭಿಪ್ರಾಯಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ‘ಭಾರತದ ಕಡಲಾಳದ ಮೆಸೊಪೆಲಾಜಿಕ್ ಮೀನುಗಳ ಸುಸ್ಥಿರ ಕೊಯ್ಲು ಮತ್ತು ಬಳಕೆಯ ಸಾಧ್ಯತೆಗಳ ಅನ್ವೇಷಣೆ’ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರದಿಯ ಪ್ರಕಾರ ಭಾರತದ ಸಮುದ್ರ ವ್ಯಾಪ್ತಿಯಲ್ಲಿ 172 ಮಿಲಿಯನ್ ಟನ್ ಇಂತಹ ಆಹಾರವಾಗಿ ಉಪಯೋಗಿಸಲಾದ ಮೀನುಗಳಿವೆ. ಮೇಣ ರೂಪದಲ್ಲಿ ಅಥವಾ ಜೆಲ್ಲಿ ರೂಪದಲ್ಲಿರುವ ಈ ಮೀನುಗಳನ್ನು ಸಾಮಾನ್ಯವಾಗಿ ಆಹಾರವಾಗಿ ಬಳಸಲಾಗುವುದಿಲ್ಲ. ಆದರೆ ಮೀನುಗಾರರ ಬಲೆಗೆ ಬೀಳುವ ಈ ತೆರನಾದ ಸಣ್ಣ ಮೀನುಗಳನ್ನು ಸಾಮಾನ್ಯವಾಗಿ ಎಸೆಯಲಾಗುತ್ತಿತ್ತು. ಪ್ರಸಕ್ತ ಫಿಶ್ ಇವುಗಳನ್ನು ಮೀಲ್‌ಗಳಲ್ಲಿ ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ ಎಂದರು.
ಈ ಮೀನುಗಳ ಸಂಗ್ರಹ ಹಾಗೂ ಬಳಕೆಯ ಬಗ್ಗೆ 1986ರಿಂದಲೂ ಭಾರತದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಯ ಕೆಲವೊಂದು ಅಂಶಗಳನ್ನೇ ತಮ್ಮದಾಗಿಸಿಕೊಂಡು ಯೂರೋಪ್, ಅಮೆರಿಕ, ಜಪಾನ್‌ನಂತಹ ದೇಶಗಳಲ್ಲಿ ಈ ಮೀನುಗಳಿಂದ ಔಷಧಗಳನ್ನು ತಯಾರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಆಹಾರವಾಗಿ ಬಳಕೆಯಾಗದ ಮೀನುಗಳ ಜೀವಕಣಗಳ ಇನ್ನಷ್ಟು ಸಂಶೋಧನೆಯ ಮೂಲಕ ಭಾರತದಲ್ಲಿ ಈ ಮೀನುಗಳ ಸುಸ್ಥಿರ ಸಂಗ್ರಹ ಮತ್ತು ಉತ್ಪನ್ನಗಳಿಗೆ ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಐಸಿಎಆರ್-ಸಿಎಂಎಫ್‌ಆರ್‌ಐ ನಿರ್ದೇಶಕ ಡಾ. ಎ. ಗೋಪಾಲಕೃಷ್ಣನ್, ವಿಶ್ವದಾದ್ಯಂತ ಸಮುದ್ರದಾಳದಲ್ಲಿ ಆಹಾರವಾಗಿ ಬಳಕೆಯಾಗದ ಮತ್ಸ್ಯ ಸಂಪತ್ತು ಸುಮಾರು 12,000 ಮಿಲಿಯನ್ ಮೆಟ್ರಿಕ್ ಟನ್ ಇರುವುದಾಗಿ ಅಂದಾಜಿಸಲಾಗಿದೆ. ಭಾರತೀಯ ಸಮುದ್ರದಲ್ಲಿಯೂ 160 ತಳಿಗಳೊಂದಿಗೆ 365 ಮಿಲಿಯನ್ ಮೆಟ್ರಿಕ್ ಟನ್ ಇಂತಹ ಮೀನು ಇರುವುದಾಗಿ ಅಂದಾಜಿಸಲಾಗಿದೆ ಎಂದರು.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಆಗಬಹುದಾಗ ಪರಿಣಾಮಗಳನ್ನು ಗಮನದಲ್ಲಿರಿಸಿ ಈ ಮೀನುಗಳ ಬಳಕೆಯ ಕುರಿತಂತೆ ಸಿಎಂಎಫ್‌ಐಆರ್ ಮೂಲಕ ಪೈಲಟ್ ಯೋಜನೆ ಜಾರಿಯಲ್ಲಿದೆ. ಕರಾವಳಿಯ ಸಮುದ್ರವು ಈಗಾಗಲೇ ಅತಿಯಾದ ಮೀನುಗಾರಿಕೆಗೆ ಒಳಗಾಗಿದೆ ಎಂಬ ಆರೋಪದ ಸಮಯದಲ್ಲಿ ಸಮುದ್ರ ಮಟ್ಟದಿಂದ ಸುಮಾರು 200 ಮೀಟರ್ ತಳಭಾಗದಲ್ಲಿರುವ ಇಂತಹ ಆಹಾರವಾಗಿ ಉಪಯೋಗಿಸಲಾದ ಮೀನುಗಳ ಉಪ ಉತ್ಪನ್ನಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಐಸಿಎಆರ್‌ನ ಸಹಾಯಕ ಮಹಾ ನಿರ್ದೇಶಕ ಡಾ. ಸುದೀಪ್ ಘೋಷ್, ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕಲ್ಲಾರ್, ಡಾ. ಶೋಭಾ ಜೆ., ಡಾ. ಪ್ರವೀಣ್ ಪುತ್ರನ್, ಸಾಧು ಸಾಲ್ಯಾನ್ ಮತ್ತಿತರರು ಇದ್ದರು.
ಡಾ. ಸುಜಾತ ಥಾಮಸ್ ಸ್ವಾಗತಿಸಿದರು. ಡಾ. ರಾಜೇಶ್ ವಂದಿಸಿದರು.