ಸರ್ಕಾರಿ ಉಪಕರಣ-ತರಬೇತಿ ಕೇಂದ್ರದೊಂದಿಗೆ ಸಾಹೇ ವಿವಿ ಜಂಟಿ ಒಡಂಬಡಿಕೆ
ಕನ್ನಡಪ್ರಭ ವಾರ್ತೆ ತುಮಕೂರುತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸುಧಾರಿತ ಕೌಶಲ್ಯ ತರಬೇತಿಗಾಗಿ ಜಂಟಿ ಕಾರ್ಯಕ್ರಮಗಳ ಮೂಲಕ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವುದು, ಸಂಶೋಧನೆ ಸಹಭಾಗಿತ್ವ ಮತ್ತು ನಾವೀನ್ಯತೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತುಮಕೂರಿನ ಸಾಹೇ (ಶ್ರೀ ಸಿದ್ಧಾರ್ಥ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್) ವಿಶ್ವವಿದ್ಯಾಲಯದೊಂದಿಗೆ ಬೆಂಗಳೂರಿನ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.ನಗರದ ಸಾಹೇ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಮಾತುಕತೆಯಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಪ್ರತಿನಿಧಿಗಳ ಜಂಟಿ ಸಭೆಯಲ್ಲಿ ಇನ್ನು ಮುಂದೆ ಎರಡು ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸಹಕಾರ ಸಂಬಂಧಗಳನ್ನು ಔಪಚಾರಿಕಗೊಳಿಸಲು ಮತ್ತು ವೇಗಗೊಳಿಸಿಕೊಳ್ಳುವ ಸಂಬಂಧ ಚರ್ಚಿಸಿದವು. ಎರಡು ವಿವಿಗಳ ನಡುವಿನ ಸಹಕಾರವನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಎರಡೂ ಸಂಸ್ಥೆಗಳಿಂದ ಶೈಕ್ಷಣಿಕವಾಗಿ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೆ ತರಲು ಬದ್ಧವಾಗಿರಲು ತಿರ್ಮಾನಿಸಲಾಯಿತು. ಈ ವೇಳೆ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮತ್ತು ರಾಜ್ಯ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಮಹೇಶ್ ರೆಡ್ಡಿ ಅವರು ಪರಸ್ಪರ ಒಡಂಬಡಿಕೆ ಪತ್ರಗಳಿಗೆ ಸಹಿ ಮಾಡಿ, ವಿನಿಮಯ ಮಾಡಿಕೊಂಡರು. ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸುಧಾರಿತ ಕೌಶಲ್ಯ ತರಬೇತಿಗಾಗಿ ಜಂಟಿ ಕಾರ್ಯಕ್ರಮಗಳ ಮೂಲಕ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವುದು. ಸಂಶೋಧನೆ ಸಹಭಾಗಿತ್ವ ಮತ್ತು ನಾವೀನ್ಯತೆ. ಉದ್ಯಮದ ಅಗತ್ಯತೆಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಸಂಪರ್ಕ ಕಲ್ಪಿಸುವುದು, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮಾಡಲು ಅವಕಾಶಗಳು ಮತ್ತು ಪ್ರಮಾಣೀಕರಣ ಕೋರ್ಸ್‌ಗಳು, ಕೈಗಾರಿಕಾ ಭೇಟಿ, ಎರಡು ಸಂಸ್ಥೆಗಳ ಅಧ್ಯಾಪಕರ ನಡುವೆ ಕೌಶಲ್ಯದ ವಿನಿಮಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗಾವಕಾಶವನ್ನು ಬಲಪಡಿಸುವುದು ಈ ಒಡಂಬಡಿಕೆಯ ಪ್ರಮುಖ ಉದ್ದೇಶ ಎಂದು ರಾಜ್ಯ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಮಹೇಶ್ ರೆಡ್ಡಿ ತಿಳಿಸಿದರು.
ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ, ಎರಡೂ ಸಂಸ್ಥೆಗಳು ಪರಸ್ಪರ ಸಂಪರ್ಕವನ್ನು ಕಲ್ಪಿಸಿಕೊಂಡಿರುವುದರಿಂದ ಜಂಟಿ ಸೆಮಿನಾರ್‌ಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಆಯೋಜಿಸಿ, ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ವರ್ಚುವಲ್ ಉಪನ್ಯಾಸಗಳನ್ನು ಮತ್ತು ವರ್ಚುವಲ್ ಇಂಟರ್ನ್ಶಿಪ್‌ಗಳು, ಪ್ರಾಜೆಕ್ಟ್ ಪ್ರದರ್ಶನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುದು ಎಂದು ವಿವರಿಸಿದರು.ಸಾಹೇ ವಿವಿ ಕುಲಸಚಿವರಾದ ಡಾ.ಅಶೋಕ್ ಮೆಹತಾ, ಪರೀಕ್ಷಾಂಗ ಕುಲಸಚಿವರಾದ ಡಾ.ಗುರುಶಂಕರ್, ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತೇಶ್ ಎಂ ನಡಕಟ್ಟಿ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಕೋಮಲಾ ಸಾಹೇ ವಿವಿ ಐಕ್ಯುಎಸಿ ಸಂಯೋಜಕರಾದ ಡಾ.ಚಿದಾನಂದಮೂರ್ತಿ ಎಂ.ವಿ. ಸಂಶೋಧನಾ ವಿಭಾಗದ ಸಂಯೋಜಕರಾದ ಡಾ.ಸುನಿಲ್.ಕೆ ವೈದ್ಯಕೀಯಕಾಲೇಜಿನ ಪ್ರಾಂಶುಪಾಲರಾದ ಡಾ.ಸಾಣಿಕೊಪ್ಪ, ಡೆಂಟಲ್‌ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ಸೇರಿದಂತೆ ವಿಭಾಗಗಳ ಪ್ರಾಧ್ಯಾಪಕರು ಈ ಜಂಟಿ ಒಪ್ಪಂದ ಸಭೆಯಲ್ಲಿ ಪಾಲ್ಗೊಂಡಿದ್ದರು.